ಅಂದಿನ ಮತ್ತು ಇಂದಿನ ಹೋರಾಟಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ : ಜಿ.ಎಸ್. ಮಂಜುನಾಥ್
There is a vast difference between the struggles of then and today: G.S. Manjunath
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಹೋರಾಟಗಳು ಈಗ ನಡೆಯುತ್ತಿರುವ ಹೋರಾಟಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಅಂದು ಬದ್ದತೆಯಿಂದ ಹೋರಾಟವನ್ನು ಮಾಡುತ್ತಿದ್ದರು. ಆದರೆ ಇಂದು ಹೋರಾಟ ಮಾಡಬೇಕೆಂಬ ಕಾರಣದಿಂದಷ್ಟೇ ಹೋರಾಟವನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‍ನ ಕಾರ್ಮಿಕ ವಿಭಾಗ ಹಾಗೂ ಆದಿ ಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಮೂವ್ ಮೆಂಟ್ ಚಳುವಳಿಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಾರತವನ್ನು ಆಳುತ್ತಿದ್ದ ಬ್ರಿಟಿಷರನ್ನು ಭಾರತ ಬಿಟ್ಟು ಹೋಡಿಸಬೇಕೆಂದು ಅಂದಿನ ಹಲವಾರು ನಾಯಕರು ಮುಖಂಡರು, ಹೋರಾಟಗಾರರು ಈ ಚಳುವಳಿಯನ್ನು ರೂಪಿಸಿದರು. ಅದರ ಪರಿಣಾಮ ಅಂದು ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಗೆ ಓಡಿಸಲು ಮುನ್ನುಡಿಯಾಯಿತು. ಅಂದು ಎಲ್ಲರು ಸಹಾ ಇದಕ್ಕೆ ಕೈಜೋಡಿಸಿ ಉತ್ತಮವಾದ ಹೋರಾಟವನ್ನು ಮಾಡುವುದರ ಮೂಲಕ ದೇಶದಲ್ಲಿನ ಬ್ರಿಟಿಷರನ್ನು ನಮ್ಮ ದೇಶದಿಂದ ಹೊರಗೆ ಹಾಕಲು ಪ್ರಾರಂಭವಾಯಿತು ಎಂದರು.
ಅಂದಿನ ದಿನಮಾನದಲ್ಲಿ ನಡೆಯುವ ಯಾವ ಚಳುವಳಿಗಳಾದರು ಸಹಾ ಬದ್ದತೆಯಿಂದ ನಡೆಯುತ್ತಿದ್ದವೂ ಯಾವುದು ಸಹಾ ಕಾಟಾಚಾರಕ್ಕೆ ನಡೆಯುವ ಚಳುವಳಿಗಳಾಗಿರಲಿಲ್ಲ, ಯಾರೇ ಹೋರಾಟಕ್ಕೆ ಕರೆ ನೀಡಿದರು. ಸಹಾ ದೇಶದಲ್ಲಿ ಉತ್ತಮವಾದ ಜವಾಬ್ದಾರಿಯುತವಾದ ಹೋರಾಟಗಳು ನಡೆಯುತ್ತಿದ್ದವು. ಈ ರೀತಿಯಾದ ಹೋರಾಟಗಳನ್ನು ನಾವುಗಳು ಕಂಡಿಲ್ಲ. ಆದರೆ ಪುಸ್ತಕದಲ್ಲಿ ಓದಿಕೊಂಡು ತಿಳಿಯಲಾಗಿದೆ, ಇದನ್ನೇ ಸಿನಿಮಾ ಸಹಾ ಮಾಡಲಾಗಿದೆ. ಅಂದಿನ ಹೋರಾಟ ಎಂದರೆ ಯಾರೂ ಸಹಾ ಎದೆಗುಂದದೆ ಹೋರಾಟಕ್ಕೆ ಎದೆ ಒಡ್ಡುವುದರ ಮೂಲಕ ತನ್ನ ಜೀವದ ಹಂಗನ್ನು ತೊರೆದು ಹೋರಾಟವನ್ನು ಮಾಡುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಹೋರಾಟ ಎಂದರೆ ಸಾಕು ಯಾರು ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕೇತಿಕವಾದ ಚಳುವಳಿಗಳಾಗುತ್ತಿವೆ. ಅಂದು ಹೋರಾಟದ ಮೂಲಕ ಜೈಲಿಗೆ ಹೋಗಲು ತಾಮುಂದೆ ನಾ ಮುಂದೆ ಎನ್ನುತ್ತಿದ್ದ ಕಾಲ ಇತ್ತು ಆದರೆ ಇಂದು ಜೈಲು ಎಂದರೆ ಸಾಕು ಜನತೆ ಹೋರಾಟದಿಂದ ಹಿಂದೆ ಸರಿಯುತ್ತಾರೆ ಎಂದು ವಿಷಾಧಿಸಿದರು.
ಸ್ವಾತಂತ್ರ್ಯ ಚಳುವಳಿಯ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ನಮ್ಮ ಪೂರ್ವಜನರ ಹೋರಾಟದ ಫಲವನ್ನು ನಾವುಗಳು ಇಂದು ಆಚರಣೆ ಮಾಡುತ್ತಿದ್ದೇವೆ. ರಾಹುಲ್ ಗಾಂಧಿಯವರು ದೇಶದ ಪ್ರಧಾನ ಮಂತ್ರಿಯಾಗುವ ಹಂಬಲ ಇಲ್ಲ, ಆದರೆ ಕಾಂಗ್ರೆಸ್ ಸಿದ್ದಾಂತವನ್ನು ಬಲಪಡಿಸುವ ಹಂಬಲವನ್ನು ಹೊಂದಿದ್ದಾರೆ. ವಿರೋಧ ಪಕ್ಷದವರು ರಾಹುಲ್ ಇನ್ನೂ ಮದುವೆಯಾಗಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ ಆದರೆ ಆವರು ದೇಶಕ್ಕಾಗಿ ದೇಶದ ಒಳಿತಿಗಾಗಿ ಕೆಲಸವನ್ನು ಮಾಡುತ್ತಿದ್ದಾರೆ ಇದರ ಬಗ್ಗೆ ಅರಿವು ಇಲ್ಲದ ಕೆಲವರು ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು, ಕೆಲವು ಜನತೆ ಸುಳ್ಳನ್ನು ಹೇಳುವುದೆ ತಮ್ಮ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಸುಳ್ಳನ್ನೇ ಹೇಳುವುದೆ ನಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಇಂದಿನ ದಿನದಲ್ಲಿ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಗಾಂಧಿಜೀಯವರ ಮನೆತನದಿಂದ ದೇಶ ಉಳಿದಿದೆ ಎಂದು ಮಂಜುನಾಥ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಅಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಅಂದು ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಮಾದರಿಯಲ್ಲಿ ಇಂದು ಅಂತಹದೊಂದು ಚಳುವಳಿಯಾಗಬೇಕಿದೆ. ಅಂದು ಬ್ರಿಟಿಷರೇ ದೇಶವನ್ನು ಬಿಟ್ಟು ಹೋಗಿ ಎಂದು ಹೇಳಲಾಗಿತ್ತು. ಆದರೆ ಇಂದು ಬಿಜೆಪಿಯವರೇ ಅಧಿಕಾರವನ್ನು ಬಿಟ್ಟು ಹೋಗಿ ಎಂದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಯುದ್ದದ ಸಮಯದಲ್ಲಿ 1 ಲಕ್ಷ ಜನರ ಬಂಧನವಾಯಿತು 10 ಸಾವಿರ ಜನರ ಸಾವಾಯಿತು, ಕ್ವಿಟ್ ಇಂಡಿಯಾವನ್ನು ಈಗ ಹಲವಾರು ಜನ ಅದನ್ನು ವೈಭವಿಕರಿಸುತ್ತಿದ್ದಾರೆ, ಆದರೆ ಇದರ ಬಗ್ಗೆ ಗೂಗಲ್‍ನಲ್ಲಿ ನೋಡಿದೆ ನಿಜವಾದ ಸತ್ಯ ಗೋತ್ತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ನಮ್ಮ ಪೂರ್ವಜನರು ಮಾಡಿದ ಹೋರಾಟದ ಫಲವಾಗಿ ಇಂದು ನಾವುಗಳು ಅದನ್ನು ಅನುಭವಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಂಡು ಬೇರೆಯವರು ಮಾಡಿದ ಪ್ರಶ್ನೆಗೆ ಉತ್ತರ ನೀಡುವಂತಾಗಬೇಕಿದೆ. ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುವ ಹಂತದಲ್ಲಿ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರನ್ನೇ ಬದಲಾಯಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ವಿರೋಧ ಪಕ್ಷದವರು ನಮ್ಮ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಸುಳ್ಳನ್ನು ಹೇಳುವುದರ ಮೂಲಕ ಅದನ್ನೇ ಸತ್ಯ ಎಂದು ಎಲ್ಲರನ್ನು ನಂಬಿಸುತ್ತಿದ್ದಾರೆ ಇದರ ಬಗ್ಗೆ ಹೋರಾಟವನ್ನು ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಜಿ.ಪಂ. ಮಾಜಿ ಸದಸ್ಯ ಗಿರಿ ಜಾನಕಲ್, ಆನಂತ್, ಮಂಜುನಾಥ್, ಮುದಸಿರ್, ಖುದ್ದುಸ್, ರಂಗಸ್ವಾಮಿ, ಪೂಜಾರಿ, ಭೂತೇಶ್, ಅಬ್ದುಲ್, ಸುದರ್ಶನ್, ಸೇರಿದಂತೆ ಇತರರು ಭಾಗವಹಿಸಿದ್ದರು.






