ಶಿವಮೊಗ್ಗ: ಹಾನಗಲ್ ಮತ್ತು ಸಿಂಧಗಿಯಲ್ಲಿ ಉಪಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ನೋಡಿದಾಗ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಮತ್ತು ಕೇಂದ್ರದ ಮನಮೋಹನ್ ಸಿಂಗ್ ಅವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಕಾರ್ಯಕ್ರಮಗಳನ್ನು ಜನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡೂಕಾಲು ವರ್ಷಗಳಲ್ಲಿ ರಾಜ್ಯ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ.
2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಇದರಿಂದ ಜನ ನೊಂದಿದ್ದಾರೆ. ಜೊತೆಗೆ ಬೆಲೆಯೇರಿಕೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಸರ್ಕಾರ ಎರಡು ಕಾರಣ ನೀಡುತ್ತಿದೆ. ಒಂದು ಹಿಂದಿನ ಯು.ಪಿ.ಎ ಸರ್ಕಾರ ಕಚ್ಚಾತೈಲದ ಮೇಲೆ ಸಾಲ ಮಾಡಿತ್ತು. ಎರಡನೆಯದು ಬೆಲೆಯೇರಿಕೆ ಇಂದ ಬಂದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುತ್ತಿದ್ದೇವೆ. ಇದನ್ನು ಮನ್ ಕೀ ಬಾತ್ ನಲ್ಲಿ ಮೋದಿಯವರು ಹೇಳಿದ್ದಾರೆ. ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ, 1 ಲಕ್ಷದ 40 ಸಾವಿರ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ ತೀರಿಸಿರುವ ಸಾಲ 3500 ಕೋಟಿ. ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ. 2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಡೀಸೆಲ್ 3 ರೂಪಾಯಿ 45 ಪೈಸೆ ಇತ್ತು, ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಗೆ ಹೆಚ್ಚಾಗಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂಪಾಯಿ ಇತ್ತು, ಇಂದು 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 70 ಇತ್ತು ಇಂದು 112 ರೂಪಾಯಿ ಆಗಿದೆ. ಏಳು ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ. ಒಟ್ಟು ಸಾಲ ಇರುವುದೇ 1 ಲಕ್ಷದ 40 ಸಾವಿರ ಕೋಟಿ. ನರೇಂದ್ರ ಮೋದಿ ಅವರೇ ಜನರಿಗೇಕೆ ಸುಳ್ಳು ಹೇಳ್ತೀರ? ಸತ್ಯ ಹೇಳಿ.
ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಇದೆ. ಇದು 2013 ರಿಂದ 16 ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ರಾ? ಇದಕ್ಕೆ ಮೋದಿಯವರ ಬಳಿ ಉತ್ತರವಿದೆಯೇ?
2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಇವತ್ತು 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ? ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ. ಡೀಸೆಲ್ ಪೆಟ್ರೋಲ್ ಬೆಲೆ ಹೆಚ್ಚಾದರೆ ರೈತರಿಗೇನು ಸಮಸ್ಯೆ ಆಗಲ್ಲ ಎಂದು ಕೇಂದ್ರ ಸಚಿವರೊಬ್ಬರು ದಡ್ಡನಂತೆ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಇದಕ್ಕೆ ಉತ್ತರವಿಲ್ಲ. ಅಭಿವೃದ್ಧಿ ಮೇಲೆ ಓಟು ಕೇಳೋರು ಅಭಿವೃದ್ಧಿ ಕೆಲಸ ಮಾಡಿದ್ದಾರ ಹೇಳಲಿ ಎಂದರು.