ಬೆಂಗಳೂರು: ಬಿಸಿಲಿನ ತಾಪ ಹೆಚ್ಚಾಗಿದೆ. ಹೊರಗೆ ಕಾಲಿಡಲು ಆಗುತ್ತಿಲ್ಲ. ನೆತ್ತಿ ಕೆಂಡ ಬಿದ್ದಂತೆ ಸುಡುವ ಅನುಭವವಾಗುತ್ತದೆ. ತಂಪು ಪಾನೀಯಾಗಳ ಮೊರೆ ಹೋದರೂ ದೇಹ ಮತ್ತೆ ಮತ್ತೆ ದಾವಾರುತ್ತಿದೆ. ಯಾವಾಗ ಮಳೆ ಬರುತ್ತೆ, ಭೂಮಿ ತಂಪಾಗುತ್ತೆ ಎಂದು ಕಾಯುತ್ತಿದ್ದವರಿಗೆ ವರುಣನ ಆಗಮನವಾಗುತ್ತಿದೆ. ರಾಜ್ಯಾದ್ಯಂತ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಟ್ರಫ್ ಉಂಟಾಗಿರುವ ಕಾರಣ ರಾಜ್ಯದಲ್ಲೂ ಮಳೆಯಾಗುತ್ತಿದೆ. ಇನ್ನು ಐದು ದಿನಗಳ ಕಾಲ ಮಳೆಯಾಗಲಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಶಿವಮೊಗ್ಗ, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.