ಬೆಂಗಳೂರು: ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ, ಬಿಜೆಪಿ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಆದರೆ ಈಗ ಸಮಸ್ಯೆ ಆ ಕ್ಷೇತ್ರಗಳಿಗೆ ಆಗಿದೆ.
ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದ ಕೈ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಯೇ ಇಲ್ಲ. ಆ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿ ಬೆಳೆಸಲು ಕಾಂಗ್ರೆಸ್ ನಾಯಕರು ಸುಸ್ತು ಹೊಡೆದಿದ್ದಾರೆ. ಸ್ವತಃ ಕ್ಷೇತ್ರದ ಕಾಂಗ್ರೆಸ್ ನಾಯಕರಿಂದ ಕಾಂಗ್ರೆಸ್ ಬಿಟ್ಟವರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಅವರನ್ನ ವಾಪಸು ಕರೆತನ್ನಿ ಇಲ್ಲವೇ ಈ ಕ್ಷೇತ್ರ ಮರೆತುಬಿಡಿ ಎಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರಂತೆ. ಚುನಾವಣೆ ಹತ್ತು ತಿಂಗಳು ಬಾಕಿ ಇರುವಾಗಲೇ ಶುರುವಾಗುತ್ತಾ ಘರ್ ವಾಪ್ಸಿ ಪಾಲಿಟಿಕ್ಸ್ ಎಂಬ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಾಸಕ ಸಚಿವರಿಗೆ ಕಾಂಗ್ರೆಸ್ ಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.
ಕೆ.ಆರ್ ಪುರಂ – ಬೈರತಿ ಬಸವರಾಜ್
ಆರ್ ಆರ್ ನಗರ – ಮುನಿರತ್ನ
ಯಶವಂತಪುರ – ಎಸ್ ಟಿ ಸೋಮಶೇಖರ್
ಹಿರೇಕೇರೂರು – ಬಿಸಿ ಪಾಟೀಲ್
ಚಿಕ್ಕಬಳ್ಳಾಪುರ – ಸುಧಕಾರ್
ಯಲ್ಲಾಪುರ – ಶಿವರಾಮ್ ಹೆಬ್ಬಾರ್
ಖಾಗವಾಡ – ಶ್ರೀಮಂತ್ ಪಾಟೀಲ್
ಗೋಕಾಕ್ ಸೇರಿದಂತೆ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪರ್ಯಾಯ ಅಭ್ಯರ್ಥಿಯೇ ಸಿಕ್ತಿಲ್ಲ. ಹೀಗಾಗಿ ಚುನಾವಣೆಗೂ ಮೊದಲೇ ಎಚ್ಚೆತ್ತುಕೊಂಡು ಘರ್ ವಾಪ್ಸಿ ಮಾಡಿ ಎಂದು ಜಿಲ್ಲಾ ನಾಯಕರು ಸಿದ್ದರಾಮಯ್ಯ, ಡಿಕೆಶಿ ಬಳಿ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದ ಕ್ಷೇತ್ರಗಳ ಬಿಜೆಪಿ ಶಾಸಕರನ್ನ ಮತ್ತೆ ಘರ್ ವಾಪ್ಸಿ ಮಾಡಿಸುವ ಬಗ್ಗೆ ಕೆಪಿಸಿಸಿಯಲ್ಲಿ ಚರ್ಚೆ ಆಗ್ತಿದೆ ಎನ್ನಲಾಗಿದೆ.