ವಿದ್ಯುತ್ ಕಳ್ಳತನ ; 2.59 ಕೋಟಿ ರೂ. ದಂಡ ವಿಧಿಸಿದ ಬೆಸ್ಕಾಂ ಜಾಗೃತ ದಳ

suddionenews
1 Min Read

ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂನ ಜಾಗೃತ ದಳ ಕಳೆದ 4 ತಿಂಗಳಲ್ಲಿ 10,908 ವಿದ್ಯುತ್ ಸ್ಥಾವರಗಳ ತಪಾಸಣೆ ಮಾಡಿ ತಪ್ಪಿತಸ್ಥ ಗ್ರಾಹಕರಿಗೆ 2.59 ಕೋಟಿ ರೂ. ದಂಡ ವಿಧಿಸಿದೆ.

ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೆ ಒಟ್ಟು 1781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡು ಅದರಲ್ಲಿ 1721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಅದೇ ರೀತಿ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1417.45 ಕೋಟಿ ರೂ. ನಲ್ಲಿ 358.3 ಕೋಟಿ ರೂ. ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ಎಂ.ಡಿ ವಿವರಿಸಿದರು.

ಬೆಸ್ಕಾಂ ನ ಮಾಪಕ ವಿಭಾಗದ ಸಿಬ್ಬಂದಿಗಳು ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳವರೆಗೆ 2373 ವಿದ್ಯುತ್ ಮೀಟರ್ ಗಳ ಪರಿಶೀಲನೆ ಮಾಡಿದ್ದು, ಜಕಾತಿ ದುರ್ಬಳಕೆ, ಅಧಿಕ ಲೋಡ್  ಮುಂತಾದ ಪ್ರಕರಣಗಳಲ್ಲಿ ಸುಮಾರು 7 ಕೋಟಿ ರೂ. ದಂಡ ವಿಧಿಸಿ 5 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂನ  ಕ್ಷೇತ್ರ ಸಿಬ್ಬಂದಿಗಳು 4,784 ವಿದ್ಯುತ್ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ತಪ್ಪಿತಸ್ಥರಿಗೆ 6.5 ಕೋಟಿ ರೂ. ದಂಡ ವಿಧಿಸುವುದರೊಂದಿಗೆ 3.9 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ಬೆಸ್ಕಾಂ ಎಂ.ಡಿ ತಿಳಿಸಿದ್ದಾರೆ.

ಬೆಸ್ಕಾಂ ಕಾರ್ಯವ್ಯಾಪ್ತಿಯ ರಾಜಾಜಿನಗರ, ಜಯನಗರ, ಇಂದಿರಾನಗರ, ಮಲ್ಲೇಶ್ವರ, ಹೊಸಕೋಟೆ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 11 ಜಾಗೃತ ದಳ ಠಾಣೆಗಳಲ್ಲಿ 11 ಇನ್ಸ್ಪೆಕ್ಟರ್ ಹಾಗೂ ಸಬ್-ಇನ್ಸ್ಪೆಕ್ಟರ್ ಗಳೊಂದಿಗೆ ಪೊಲೀಸ್ ಸೂಪರಿಂಟೆಡೆಂಟ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಗಳ ನೇತೃತ್ವದಲ್ಲಿ ಜಾಗೃತ ದಳ ಕಾರ್ಯನಿರ್ವಹಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *