ಚಾಮರಾಜನಗರ : ಸಚಿವ ವಿ. ಸೋಮಣ್ಣ ಜಮೀನಿನ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಿವೇಶನ ಹಕ್ಕುಪತ್ರ ವಿತರಿಸಲು ಆಗಮಿಸಿದ್ದ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಬಿಜೆಪಿಯ ವಿ.ಸೋಮಣ್ಣ ಅವರಿಗೆ ನಿವೇಶನ ಹಕ್ಕುಪತ್ರ ಸಿಗದ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿ ತೆರಳಿದರು. ಸಮಸ್ಯೆ ಹೇಳಿಕೊಳ್ಳಲು ತೆರಳಿದ ಮಹಿಳೆಗೆ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 94 ಸಿ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭೂ ಸಕ್ರಮಕ್ಕಾಗಿ ಸುಮಾರು 175 ಜನರು ಹಕ್ಕು ಪತ್ರಗಳಿಗೆ ಅರ್ಹರಾಗಿದ್ದರು. ಮಹಿಳೆಯ ಪ್ರಕಾರ, ಕಂದಾಯ ಇಲಾಖೆಯಡಿಯಲ್ಲಿ ವಸತಿ ಮಂಜೂರು ಮಾಡದ ತನ್ನ ಸಂಕಷ್ಟವನ್ನು ಹೇಳಿಕೊಳ್ಳಲು ಸಚಿವರ ಬಳಿ ತೆರಳಿದಾಗ ಸಚಿವ ಸೋಮಣ್ಣ ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಸೋಮಣ್ಣ ಅವರು ಮಧ್ಯಾಹ್ನ 3.30ಕ್ಕೆ ಬರಬೇಕಿತ್ತು, ಆದರೆ ಎರಡು ಗಂಟೆ ತಡವಾಗಿ ಆಗಮಿಸಿದರು.
ಬಿಜೆಪಿಯ ಸಚಿವರು ಸಾರ್ವಜನಿಕರೊಂದಿಗೆ ಈ ರೀತಿಯ ದುರ್ನಡತೆ ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರೈತ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದರು.
ತೀರಾ ಇತ್ತೀಚೆಗೆ, ಸೆಪ್ಟೆಂಬರ್ 3 ರಂದು, ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ಮಹಿಳೆಗೆ ಬೆದರಿಸಿ ಮತ್ತು ಮಾತಿನ ಮೂಲಕ ನಿಂದಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಗಿತ್ತು.
ಈ ಹಿಂದೆ, ಜನತಾ ದಳ (ಜಾತ್ಯತೀತ) ಮುಖಂಡರೊಬ್ಬರು ಕರ್ನಾಟಕದ ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಾಜಕಾರಣಿ ಎಂ ಶ್ರೀನಿವಾಸ್ ಕಾಲೇಜಿಗೆ ಭೇಟಿ ನೀಡಿದಾಗ ಕಂಪ್ಯೂಟರ್ ಲ್ಯಾಬ್‌ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಾಂಶುಪಾಲರು ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗದ ಕಾರಣ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದರು ಎಂದು ವರದಿಯಾಗಿದೆ.