ಸುದ್ದಿಒನ್ : ದೇಶದೆಲ್ಲೆಡೆ ಭಾರೀ ಮಳೆಯಾಗುತ್ತಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕೆಲವು ಪ್ರದೇಶಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರೀ ಮಳೆಯಿಂದಾಗಿ ನಗರಗಳು ಮತ್ತು ಪಟ್ಟಣಗಳು ಜಲಾವೃತವಾಗುತ್ತಿವೆ. ದೊಡ್ಡ ದೊಡ್ಡ ಕಟ್ಟಡಗಳು, ಸೇತುವೆಗಳು ಕೂಡ ಪ್ರವಾಹಕ್ಕೆ ಕೊಚ್ಚಿ ಹೋದ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ. ಮತ್ತೊಂದೆಡೆ ಮಳೆ ಸಮೃದ್ಧಿಯಾಗಿರುವುದರಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಸ್ಥಳೀಯ ಆಚಾರ – ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಳೆ ದೇವರನ್ನು ಸಂತೃಪ್ತಿ ಪಡಿಸಲು ಅಲ್ಲಿನ ಜನರು ಕತ್ತೆಗಳಿಗೆ ಗುಲಾಬ್ ಜಾಮೂನಿನ ಔತಣವನ್ನು ಏರ್ಪಡಿಸಿದ್ದರು. ಇದು ವಿಚಿತ್ರ ಎನಿಸಿದರೂ ಮಧ್ಯಪ್ರದೇಶದಲ್ಲಿ ಈ ವಿಚಿತ್ರ ಸಂಪ್ರದಾಯ ಆಚರಣೆಯಲ್ಲಿದೆ.
ಮಧ್ಯಪ್ರದೇಶದಲ್ಲಿ ಜನರು ಮಳೆ ದೇವರನ್ನು ಸಂತೃಪ್ತಿ ಪಡಿಸಲು ಕತ್ತೆಗಳಿಗೆ ಗುಲಾಬ್ ಜಾಮೂನ್ ತಿನ್ನಿಸಿ ಸಂಭ್ರಮಿಸಿದರು. ಮಂದಸೌರ್‌ನ ಹಳ್ಳಿಯೊಂದರಲ್ಲಿ ಜನರು ತಮ್ಮ ಇಚ್ಛೆಯಂತೆ ಮಳೆ ಬಂದ ನಂತರ ಕತ್ತೆಗಳಿಗೆ ಗುಲಾಬ್ ಜಾಮೂನ್ ತಿನ್ನಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬುದು ಹಲವೆಡೆ ನಂಬಿಕೆ. ಅದೇ ರೀತಿ ಮಧ್ಯಪ್ರದೇಶಕ್ಕೂ ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿನ ಹಲವು ಪ್ರದೇಶಗಳಲ್ಲಿ ಬರ ತಡೆಯಲು ಕತ್ತೆಗಳಿಗೆ ಗುಲಾಬ್ ಜಾಮ್ ತಿನ್ನಿಸಲಾಗುತ್ತದೆ. ಹೀಗೆ ಮಾಡಿದರೆ ವರುಣನ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ಜನರ ನಂಬಿಕೆ. ಇದೀಗ ಈ ಸಂಪ್ರದಾಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗ್ರಾಮಸ್ಥರು ಕತ್ತೆಗಳಿಗೆ ಗುಲಾಬ್ ಜಾಮೂನ್ ತಿನ್ನಿಸುತ್ತಿದ್ದಾರೆ. ಕತ್ತೆಗಳಿಗೆ ಸ್ನಾನ ಮಾಡಿಸಿ, ಮಾಲೆ ಹಾಕಿ ಸಿಹಿ ತಿಂಡಿ, ವಿಶೇಷವಾಗಿ ಗುಲಾಬ್ ಜಾಮೂನ್ ತಿನ್ನಿಸುವುದು ಇಲ್ಲಿನ ಸಂಪ್ರದಾಯ. ಹೀಗೆ ಮಾಡಿದರೆ ಇನ್ನಷ್ಟು ಉತ್ತಮ ಮಳೆಯಾಗಲಿದೆ ಎಂಬ ನಂಬಿಕೆ ಅಲ್ಲಿನ ಜನರದ್ದು.