ಮಂಡ್ಯ: ವಾಡಿಕೆಯಂತೆ ಮಳೆ ಬಂದಿದ್ದರೆ ರಾಜ್ಯದ ಎಲ್ಲಾ ಡ್ಯಾಂಗಳು ತುಂಬಬೇಕಿತ್ತು. ಆದರೆ ಮಳೆ ಕಾಣದಂತೆ ಮಾಯಾವಾಗಿದೆ. ಹೀಗಾಗಿ ಕೃಷಿಗೆ ಇರಲಿ ಕುಡಿಯುವ ನೀರಿಗೂ ಹಾಹಾಕಾರದ ಭಯ ಶುರುವಾಗಿದೆ. ಅದರಲ್ಲೂ ಕಾವೇರಿ ನೀರು ಕಡಿಮೆಯಾದರೆ ಇಡೀ ಬೆಂಗಳೂರಿನ ಜನತೆ ನೀರಿನ ಸಮಸ್ಯೆ ಎದುರಿಸುತ್ತಾರೆ. ಮಳೆಯಿಲ್ಲದೆ ಕಾವೇರಿಯಲ್ಲಿ ದಿನೇ ದಿನೇ ನೀರು ಕಡಿಮೆಯಾಗುತ್ತಲೆ ಇದೆ.
ಒಂದು ಕಡೆ ಕರ್ನಾಟಕದಲ್ಲಿಯೇ ಮಳೆ ಇಲ್ಲ. ಆದರೆ ತಮಿಳುನಾಡಿಗೆ ಮಾತ್ರ ಬಿಡಬೇಕಾದ ಕಾವೇರಿ ನೀರನ್ನು ಸರ್ಕಾರ ಬಿಡುತ್ತಲೇ ಇದೆ. ಇದು ಮಂಡ್ಯ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಕೆಆರ್ಎಸ್ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ, 21 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಬಳಕೆಗೆ 16 ಟಿಎಂಸಿ ನೀರು ಮಾತ್ರ ಇದೆ.
ಈ ಸಂಬಂಧ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆಯಲಾಗಿದೆ. ಹೀಗಾಗಿ ಮಂಡ್ಯ ರೈತರ ಕಣ್ಣು ಇಂದಿನ ಸಭೆಯ ಮೇಲೆ ಇದೆ. ತಮಿಳುನಾಡಿಗೆ ನೀರು ಬಿಡುತ್ತಾ ಹೋದರೆ ಖಂಡಿತಾ ರಾಜ್ಯದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗುತ್ತದೆ. ಹೀಗಾಗಿಯೇ ರಾಜ್ಯ ಸರ್ಕಾರದ ಮೇಲೆ ರೈತರು ನೀರು ಬಿಡದಂತೆ ಒತ್ತಡ ಹಾಕುತ್ತಿದ್ದಾರೆ.