ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ,( ನ.24) : ರಾಜ್ಯದ 31 ಜಿಲ್ಲೆಗಳಲ್ಲಿ ಮಹಿಳಾ ಹಾಗೂ ಯುವ ಘಟಕಗಳನ್ನು ರಚಿಸಿ ವಿಶ್ವಕರ್ಮ ಸಮುದಾಯವನ್ನು ಸಂಘಟಿಸಲಾಗುವುದೆಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್(ರಿ) ನವದೆಹಲಿ ಇದರ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮುದಾಯವನ್ನು ಸಂಘಟಿಸಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳುವುದಕ್ಕಾಗಿ ಅಖಿಲ ಭಾರತ ವಿಶ್ವಕರ್ಮ ಪರಿಷತ್‍ನ್ನು ರಚಿಸಲಾಗಿದೆ.
ವಿಶ್ವಕರ್ಮ ಸಮಾಜ ಐದು ಕಸುಬುಗಳನ್ನು ಮಾಡುವ ಏಕೈಕ ಸಮಾಜವಾಗಿದ್ದು, ಕಸುಬಿನ ಆಧಾರದ ಮೇಲೆ ಗುರುತಿಸಿಕೊಂಡಿದೆ. ಸನಾತನ ಹಿಂದೂ ಧರ್ಮದ ವೈಚಾರಿಕತೆಯುಳ್ಳದ್ದಾಗಿರುವ ಈ ಸಮಾಜದ ಕಟ್ಟಕಡೆಯವರನ್ನು ಗುರುತಿಸಿ ಸಂಘಟಿಸಬೇಕಾಗಿರುವುದರಿಂದ ಕಳೆದ 25 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ರಾಜ್ಯದ 31 ಜಿಲ್ಲೆಗಳಲ್ಲಿಯೂ ಪದಾಧಿಕಾರಿಗಳನ್ನು ರಚಿಸಿ ವಿಶ್ವಕರ್ಮ ಸಮುದಾಯವನ್ನು ಜಾಗೃತಿಗೊಳಿಸುವ ಮೂಲಕ ಸಂಘಟಿಸಲಾಗುವುದೆಂದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಹೆಚ್.ವಿ.ಸತೀಶ್‍ಕುಮಾರ್ ಮಾತನಾಡಿ ಅತಿ ಹಿಂದುಳಿದಿರುವ ವಿಶ್ವಕರ್ಮ ಸಮುದಾಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದರಿಂದ ರಾಜ್ಯಾದ್ಯಂತ ಸಂಚರಿಸಲಾಗುವುದು. ಐ.ಎ.ಎಸ್, ಐ.ಪಿ.ಎಸ್, ಕೋಚಿಂಗ್ ಪಡೆಯುವ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಸತಿ ಮತ್ತು ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗುವುದು. ರಾಜ್ಯಾದ್ಯಂತ ಇರುವ ಕಾಳಿಕಾದೇವಿ ದೇವಸ್ಥಾನಗಳ ಸ್ಥಿತಿಗತಿಗಳನ್ನು ವೀಕ್ಷಿಸಿ ಅವಲೋಕನ ಮಾಡುವ ಮುಖೇನ ರಾಜ್ಯದ ಇಡಿ ದೇವಸ್ಥಾನಗಳ ಮಾಹಿತಿಯುಳ್ಳ ಪುಸ್ತಕ ಬಿಡುಗಡೆ ಮಾಡಲಾಗುವುದೆಂದರು.
ನಮ್ಮ ಸಮುದಾಯದಲ್ಲಿ ಶಾಸಕರು, ಸಂಸದರು, ಸಚಿವರುಗಳ್ಯಾರು ಇಲ್ಲ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಗೊತ್ತಾಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಡೆ ಸುತ್ತಾಡಿ ವಿಶ್ವಕರ್ಮ ಸಮಾಜವನ್ನು ಬಲಪಡಿಸುವುದು ಪರಿಷತ್‍ನ ಉದ್ದೇಶ ಎಂದು ನುಡಿದರು.
ಹಿರಿಯೂರಿನಲ್ಲಿರುವ ಚಿಟುಗು ಮಲ್ಲೇಶ್ವರಸ್ವಾಮಿ ದೇವಸ್ಥಾನದ ಜ್ಞಾನಭಾಸ್ಕರಸ್ವಾಮೀಜಿ ಮಾತನಾಡಿ ವಿಶ್ವಕರ್ಮ ಸಮುದಾಯದವರ ಕಷ್ಟಗಳನ್ನು ಆಲಿಸಲು ನಮ್ಮಲ್ಲಿ ಯಾರು ನೈಜ ನಾಯಕರುಗಳಿಲ್ಲ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸುತ್ತ ಬರುತ್ತಿವೆ. ಹಾಗಾಗಿ ವಿಶ್ವಕರ್ಮ ಸಮುದಾಯಕ್ಕೆ ಶಕ್ತಿ ತುಂಬುವುದಕ್ಕಾಗಿ ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಚಿಸಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಎಲ್ಲಾ ಕಡೆ ಸುತ್ತಾಡುತ್ತ ನಮ್ಮ ಸಮುದಾಯದವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಪರಿಷತ್‍ಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದೆಂದು ಹೇಳಿದರು.
ರಾಜ್ಯ ಪೌರಸೇವಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್.ನಾರಾಯಣಚಾರ್, ತಾಲ್ಲೂಕು ಅಧ್ಯಕ್ಷ ಎ.ಶಂಕರಾಚಾರ್, ವಿಶ್ವಕರ್ಮ ಅಭಿವೃದ್ದಿ ನಿಗಮದ ಜಿಲ್ಲಾ ಸದಸ್ಯ ಮಹಾಲಿಂಗಾಚಾರ್, ಮಾಜಿ ಸದಸ್ಯ ಬಿ.ಜಿ.ಕೆರೆ ನಾಗೇಂದ್ರಚಾರ್, ಶ್ರೀಮತಿ ಛಾಯಾದೇವಿ, ಶ್ರೀಮತಿ ಗಾಯಿತ್ರಿ, ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಈ.ಮೌನೇಶಾಚಾರ್, ಚಿತ್ರದುರ್ಗ ಜಿಲ್ಲೆ ನೂತನ ಅಧ್ಯಕ್ಷ ಎಂ.ಶಂಕರಮೂರ್ತಿ, ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಕುಮಾರಿ ಪತ್ರಿಕಾಗೋಷ್ಟಿಯಲ್ಲಿದ್ದರು.