ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ನಾಲ್ಕು ದಿನಗಳ ಒಳಗೆ ಪರಿಹಾರ ಒದಗಿಸಲಾಗುವುದು : ಸಚಿವ ಶ್ರೀರಾಮುಲು

1 Min Read

ಚಳ್ಳಕೆರೆ : ತಾಲೂಕಿನ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಗೊಳಪಡುವ ನಾಯಕನಹಟ್ಟಿ ಹೋಬಳಿಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಬಾರಿ ಮಳೆ ಹಾಗೂ ಗಾಳಿಯಿಂದ 73 ಮನೆಗಳು, 713 ಎಕರೆ ತೋಟಗಾರಿಕೆ ಬೆಳೆ, 13 ಕುರಿಗಳು ಹಾಗೂ ಯಶವಂತ ಕುಮಾರ್ ಎನ್ನುವ ಒಬ್ಬ ವ್ಯಕ್ತಿ ಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಒಳಗಾಗಿ ಸಂಬಂಧಿಸಿದ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಯಶವಂತ್ ಕುಮಾರ್ ಎನ್ನುವವರ ಸಿಡಿಲು ಬಡಿದು ಮೃತಪಟ್ಟಿದ್ದು, ಕುಟುಂಬದವರಿಗೆ ಐದು ಲಕ್ಷದ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

ಅತಿ ಮಳೆಯಿಂದ ಕಳೆದ ವರ್ಷದಲ್ಲಿ ಎರಡು ಹೋಬಳಿಯಲ್ಲಿ 32000 ಹೆಕ್ಟೇರ್ ಜಮೀನಿಗೆ ಪರಿಹಾರ ವಿತರಿಸಲಾಗಿದೆ. 233 ಮನೆಗಳ ಸಂತ್ರಸ್ತರಿಗೂ ಪರಿಹಾರ ವಿತರಿಸಲಾಗಿದೆ. ಮುಂದೆಯೂ ಇಂತಹ ಘಟನೆ ಸಂಭವಿಸಿದರೆ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಎನ್.ರಘುಮೂರ್ತಿಯವರಿಗೆ ಸೂಚಿಸಿದರು.

ಹಾಗೂ ಮೃತ ಯಶವಂತ್ ಕುಮಾರ್ ಇವರ ಕುಟುಂಬಸ್ಥರಿಗೆ ವೈದ್ಯಕೀಯ ವೆಚ್ಚ ಮತ್ತು ವೈದ್ಯಕೀಯ ದರವನ್ನು ನೀಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಇಡೀ ಜಿಲ್ಲೆಯಲ್ಲೇ ಹೆಚ್ಚಿನ ಪ್ರಮಾಣದ ಬೆಳೆ ಪರಿಹಾರವನ್ನು ಸನ್ಮಾನ್ಯ ಸಚಿವರ ಕ್ಷೇತ್ರದಲ್ಲಿ ನಷ್ಟ ಸಂಭವಿಸಿರುವಂತವರಿಗೆ ನೀಡಲಾಗಿದೆ.

ಇಡೀ ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ಸಚಿವರು ಸೂಚಿಸಿದ ಮೇರೆಗೆ ಈಗಾಗಲೇ ಮೊಳಕಾಲ್ಮೂರು ಕ್ಷೇತ್ರದ 24 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಪೌತಿ ಖಾತೆ, ಪೋಡಿ, ಪಿಂಚಣಿ, ಸ್ಮಶಾನ, ದಾರಿ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಸಚಿವರ ಸೂಚನೆಯಂತೆ ಉಳಿದ ಗ್ರಾಮಗಳನ್ನು ಸಂಪೂರ್ಣವಾಗಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮುಂದಿನ ಆರು ತಿಂಗಳೊಳಗೆ ಮಾಡಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಬಿಜೆಪಿ ಅಧ್ಯಕ್ಷ ರಾಮ ರೆಡ್ಡಿ, ಜೈ ಪಾಲಯ್ಯ, ಬಿಜೆಪಿ ಮುಖಂಡ ಮಲ್ಲೇಶ್, ಹೊನ್ನೂರ್, ಗೋವಿಂದಪ್ಪ,  ಪಾತಪ್ಪನಗುಡಿ ಸುರೇಶ್, ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಮುಖಂಡ ಆಂಜನಪ್ಪ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *