ಚಿತ್ರದುರ್ಗ,(ಫೆ.24) : ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಅಲೆಮಾರಿ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳು ನಿಗದಿತ ಕಾಲಮಿತಿಯೊಳಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ ಪರಿಶಿಷ್ಟ ಜಾತಿ ಉಪಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್, ತಾಂಡಾ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರ್ಚ್ ತಿಂಗಳು ಸಮೀಪವಿದ್ದರೂ ಇದುವರೆಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ, ಅಲ್ಲದೆ ಹಂಚಿಕೆ ಮಾಡಿರುವ ಅನುದಾನವನ್ನು ಖರ್ಚು ಮಾಡದಿರುವ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಲ್ಲಿ, ಫಲಾನುಭವಿಗಳ ಆಯ್ಕೆ ಮಾಡಿ, ಸೌಲಭ್ಯ ಒದಗಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಈ ರೀತಿ ಆದಲ್ಲಿ, ಜನರಿಗೆ ನೀವು ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಕೂಡಲೆ ಆಯಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರನ್ನು ಸಂಪರ್ಕಿಸಿ, ಫಲಾನುಭವಿಗಳ ಆಯ್ಕೆಪಟ್ಟಿ ಅಂತಿಮಗೊಳಿಸಬೇಕು, ಅಲ್ಲದೆ ಕೂಡಲೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸಬೇಕು ಎಂದು ತಾಕೀತು ಮಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗಾಗಿಯೇ ಅನುದಾನ ಖರ್ಚು ಆಗಬೇಕು. ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವಂತಿಲ್ಲ. ಈ ಕುರಿತು ಯಾವುದೇ ದೂರುಗಳು ಬರಬಾರದು. ಎಸ್‍ಸಿಪಿ, ಟಿಎಸ್‍ಪಿ ಕಾಮಗಾರಿಗಳು ಬೇರೆ ಬೇರೆ ಯೋಜನೆಯಡಿ ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಬೇಕು. ಈ ಅನುದಾನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಮಾರ್ಗಸೂಚಿ ಪ್ರಕಾರ ಉತ್ತಮ ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಗರ, ಸ್ಥಳೀಯ ಸಂಸ್ಥೆಗಳು ಹಿಂದೆ :
ಜಿಲ್ಲೆಯಲ್ಲಿನ ಬಹುತೇಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳು ಪರಿಶಿಷ್ಟರ ಅಭ್ಯುದಯಕ್ಕಾಗಿ ಒದಗಿಸಿರುವ ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಬಳಕೆ ಮಾಡುವುದರಲ್ಲಿ ಪ್ರಗತಿ ಸಾಧಿಸಿಲ್ಲ, ಪರಿಶಿಷ್ಟರ ಕಾಲೋನಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿದ್ದು, ಕೆಲವೆಡೆ ಇನ್ನೂ ಟೆಂಡರ್ ಪ್ರಕ್ರಿಯೆಯನ್ನು ಕೂಡ ಪೂರ್ಣಗೊಳಿಸದಿದ್ದರೆ, ಇನ್ನು ಕೆಲವೆಡೆ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಇಂತಹ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಫೆಬ್ರವರಿ ತಿಂಗಳ ಅಂತ್ಯದೊಳಗೆ ಎಲ್ಲ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು, ಹಾಗೂ ಕಾಮಗಾರಿಗಳು ಪ್ರಾರಂಭವಾಗಬೇಕು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ, ಉದ್ಘಾಟನೆಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅನುದಾನ ವ್ಯಪಗತವಾಗದಿರಲಿ:
ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಹಂಚಿಕೆಯಾಗಿರುವ ಎಸ್‍ಸಿಪಿ, ಟಿಎಸ್‍ಪಿ ಅನುದಾನ ಯಾವುದೇ ಕಾರಣಕ್ಕೂ ವ್ಯಪಗತವಾಗಬಾರದು. ಅನುದಾನ ಲ್ಯಾಪ್ಸ್ ಆದರೆ ಇದು ಆ ಜನಾಂಗಕ್ಕೆ ಮಾಡುವ ಅನ್ಯಾಯ. ಪರಿಶಿಷ್ಟರ ಅಭಿವೃದ್ಧಿಗಾಗಿ ಬಂದಿರುವ ಅನುದಾನವನ್ನು ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಅನುದಾನ ಲ್ಯಾಪ್ಸ್ ಮಾಡಿದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವೇತನದಿಂದ ವಸೂಲಾತಿ ಮಾಡಿ, ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು, ಅಲ್ಲದೆ ಎಸ್‍ಸಿ, ಎಸ್‍ಟಿ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರಿಗೆ ಉಪಯೋಗವಾಗುವಂತಹ ಕೆಲಸ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ. ಆನಂದ್, ಡಿಹೆಚ್‍ಒ ಡಾ. ರಂಗನಾಥ್, ಡಿಡಿಪಿಐ ರವಿಶಂಕರ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಅಭಿವೃದ್ಧಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.