ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.25): ಇಕೋ ಪಾರ್ಕ್ ನಿರ್ಮಾಣ ಮಾಡುವ ನೆಪದಲ್ಲಿ ಮಲ್ಲಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಇರುವ ಐವತ್ತರಿಂದ ಎಪ್ಪತ್ತು ಮರಗಳನ್ನು ಕಡಿಸಿರುವ ಮಲ್ಲಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಆರ್.ಸಿ. ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಎನ್.ಸುನೀಲ್ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ವಿ.ಬಂಡ್ರೆ ಇವರುಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿರುವುದಾಗಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜುನಾಥ ವಿ.ಬಂಡ್ರೆ ಹೊಸದುರ್ಗ ತಾಲ್ಲೂಕು ಮಲ್ಲಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲಿನಲ್ಲಿರುವ ಸುಮಾರು ಹನ್ನೆರಡು ವರ್ಷಗಳ ಹಳೆಯ ಮರಗಳನ್ನು ಕಡಿಸಿದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಪಿ.ಡಿ.ಓ. ಹಾಗೂ ಹೊಸದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇವರುಗಳು ಕುಮ್ಮಕ್ಕು ನೀಡಿರುವ ಅನುಮಾನವಿದೆ. ಗ್ರಾಮ ಪಂಚಾಯಿತಿ ಸದಸ್ಯರಾದವರು ಯಾವುದೇ ಕಾಮಗಾರಿಯನ್ನು ನಿರ್ವಹಿಸುವಂತಿಲ್ಲ.
ಎನ್.ಆರ್.ಇ.ಜಿ. ಕಾಮಗಾರಿಯನ್ನು ಪಂಚಾಯಿತಿಯ ಕಾರ್ಮಿಕರೆ ನಿರ್ವಹಿಸಬೇಕೆಂಬ ನಿಯಮವಿದೆ. ಎಲ್ಲವನ್ನು ಧಿಕ್ಕರಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಜೆ.ಸಿ.ಬಿ.ಬಳಸಿ ಮರಗಳನ್ನು ಕಡಿದಿದ್ದಾರೆ. ಈ ಸಂಬಂಧ ದೂರು ನೀಡಿ ಎರಡು ತಿಂಗಳಾಗಿದ್ದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇತ್ತ ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.