ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಒಂದೊಂದು ಜಾತಿಗೆ ಒಂದೊಂದು ದೇವಸ್ಥಾನಗಳು ಸೀಮಿತವಾಗಿರುವ ಇಂದಿನ ಕಾಲದಲ್ಲಿ ಮೆದೆಹಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿಯವರು ಸೇರಿ ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿರುವುದು ಭಾವೈಕ್ಯತೆಯ ಸಂಕೇತ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.

ಮೆದೇಹಳ್ಳಿ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಂಡಿರುವ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಳೆದ 8 ರಿಂದ ಆರಂಭಗೊಂಡಿರುವ ಕಳಸಾರೋಹಣ, ಕುಂಬಾಭಿಷೇಕ, ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಗುರುವಾರ ಮಾತನಾಡಿದರು.
ಮೆದೇಹಳ್ಳಿ ಗ್ರಾಮ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿದ್ದರು ಇಲ್ಲಿನ ಜನ ಯಾರು ದುಶ್ಚಟಗಳಿಗೆ ಬಲಿಯಾಗಿಲ್ಲ. ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಒಗ್ಗೂಡಿ ದೇವಸ್ಥಾನ ಅನಾವರಣಗೊಳಿಸಿರುವುದು ಗ್ರಾಮಸ್ಥರ ಭಕ್ತಿಯ ಸಂಕೇತ. ಇಂತಹ ಭಾವೈಕ್ಯತೆಯ ಸಂದೇಶವನ್ನು ಇತರೆ ಗ್ರಾಮಗಳಿಗೂ ರವಾನಿಸಬೇಕಿದೆ ಎಂದು ತಿಳಿಸಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ದೇಹ ಒಂದು ಕಟ್ಟಡವಿದ್ದಂತೆ. ಮನುಷ್ಯ ದೇವಾಲಯದೊಳಗೆ ಹೋಗಿ ಹೊರಬಂದಾಗ ದೇಹ ದೇವಾಲಯವಾಗುವ ರೀತಿಯಲ್ಲಿ ಬದುಕಿದರೆ ನಿಜವಾಗಿಯೂ ಸಾರ್ಥಕವೆನಿಸುತ್ತದೆ. ಪ್ರತಿಯೊಬ್ಬರ ಬದುಕು ಕಳಸಪ್ರಾಯವಾಗಬೇಕು. ದೈವಾಂಶ ಸಂಭೂತರಾಗಿ ಜೀವಿಸಿ ದೇವಾತ್ಮವಾಗುವ ಪ್ರಕ್ರಿಯೆಯಲ್ಲಿ ದೇವಾಲಯಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಮೆದೆಹಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿಯವರು ಒಂದುಗೂಡಿ ಉಮಾ ಮಹೇಶ್ವರಿ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುರುಘಾಮಠದ ಆಡಳಿತಾಧಿಕಾರಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡುತ್ತ ನಗರಕ್ಕೆ ಸಮೀಪವಿರುವ ದೊಡ್ಡ ಗ್ರಾಮ ಮೆದೇಹಳ್ಳಿ ಬೇರೆ ಗ್ರಾಮಗಳಂತಲ್ಲ. ಅನೇಕ ಗ್ರಾಮಗಳು ಹಾಳಾಗಿರುವುದನ್ನು ನೋಡಿದ್ದೇವೆ. ಎಲ್ಲಾ ಜಾತಿಯವರು ಸೇರಿ ಉಮಾಮಹೇಶ್ವರಿ ದೇವಸ್ಥಾನ ನಿರ್ಮಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರುತ್ತಿರುವುದು ನಿಜವಾಗಿಯೂ ಅರ್ಥಪೂರ್ಣವೆನಿಸುತ್ತದೆ.
ಹಾಗಾಗಿ ಈ ಗ್ರಾಮ ಬೇರೆ ಗ್ರಾಮಗಳಿಗೆ ಆದರ್ಶವಾಗಬೇಕು. 20-30 ವರ್ಷಗಳಿಂದ ಮೆದೆಹಳ್ಳಿ ಗ್ರಾಮದ ಒಡನಾಡಿಯಾಗಿದ್ದೇನೆ. ಉಮಾ ಮಹೇಶ್ವರಿ ದೇವಸ್ಥಾನ ಒಂದು ಜಾತಿಗೆ ಸೇರಿದ್ದಲ್ಲ. ಎಲ್ಲಾ ಜನಾಂಗದವರು ಕೈಜೋಡಿಸಿದ್ದಾರೆಂದು ಹೇಳಿದರು.
ದೇವರು ಜಾತಿ, ಧರ್ಮಗಳ ಹೆಸರಿನಲ್ಲಿ ಶೋಷಣೆ, ಬಡಿದಾಟ ನಡೆಯುತ್ತಿದೆ. ಹಿಂದಿನ ಕಾಲದಲ್ಲಿ ದೇವಸ್ಥಾನಗಳು ನ್ಯಾಯಾಲಯಗಳಾಗಿದ್ದವು. ಈಗ ದೇವಸ್ಥಾನಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ದೇವರ ಹೆಸರಿನಲ್ಲಿ ಮೋಸ, ವಂಚನೆ, ಶೋಷಣೆ ನಡೆಯಬಾರದು ಎನ್ನುವುದು ಬಸವಣ್ಣನವರ ಪರಿಕಲ್ಪನೆಯಾಗಿತ್ತು ಎಂದರು.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ ಮಾತನಾಡಿ ನನ್ನ ಎಲ್ಲಾ ಕೆಲಸಗಳಿಗೆ ಮೆದೆಹಳ್ಳಿ ಗ್ರಾಮ ಪ್ರೇರಣೆ ನೀಡಿದೆ. ದೇವರು ಜಾತಿ ಧರ್ಮ ಎನ್ನುವುದು ಅವರವರ ಭಕ್ತಿಗೆ ಸೇರಿದ್ದು, ದೇವಸ್ಥಾನದಲ್ಲಿ ಯಾರು ಸುಳ್ಳು ಹೇಳುವುದಿಲ್ಲ ಎನ್ನುವುದು ಭಕ್ತಿಯ ಸಂಕೇತ. ದೇವರ ಮೇಲೆ ಮನುಷ್ಯನಲ್ಲಿ ಅಷ್ಟೊಂದು ಭಯ, ಭಕ್ತಿಯಿದೆ ಎಂದರು.
ವಿ.ಎಸ್.ಎಸ್.ಎನ್.ಸೊಸೈಟಿ ಅಧ್ಯಕ್ಷ ಎಂ.ಸಿ.ರೇವಣ್ಣ ಅಧ್ಯಕ್ಷತೆ ವಹಿಸಿದ್ದರು.
ಮೆದೆಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಧನ್ಯಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಂಕರ್, ಅಜ್ಜಪ್ಪ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.

