ರಾಯಚೂರು: ಗ್ರಾಮೀಣ ಭಾಗದಲ್ಲಿ ಇನ್ನು ಹಲವೆಡೆ ಹೇಳಿಕೊಳ್ಳುವಂತ ಮೂಲಭೂತ ಸೌಕರ್ಯಗಳೇನು ಇಲ್ಲ. ಅದರಲ್ಲೂ ಶಾಲೆಗೆ ಹೋಗದಕ್ಕೆ ಬಸ್ಸಿನ ವ್ಯವಸ್ಥೆಯೂ ಇಲ್ಲ. ಅದೆಷ್ಟೋ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಟ ನಡೆಸುತ್ತಿದ್ದಾರೆ. ನಡೆದೆ ಶಾಲೆ – ಕಾಲೇಜು ಸೇರುತ್ತಿದ್ದಾರೆ. ಎಷ್ಟು ಅಂತ ತಾಳ್ಮೆ, ಸಹನೆ ಇರುತ್ತೆ. ಇವತ್ತು ರೊಚ್ಚಿಗೆದ್ದ ವಿದ್ಯಾರ್ಥಿಗಳು ಶಾಲೆ ಬದಲಿಗೆ ತಹಶೀಲ್ದಾರ್ ಕಚೇರಿ ಎಡೆಗೆ ಹೆಜ್ಜೆ ಹಾಕಿದ್ದಾರೆ. ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.

ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಸಮರ್ಪಕ ಬಸ್ ವ್ಯವಸ್ಥೆ ಸಿಗದ ಕಾರಣ ತಹಶೀಲ್ದಾರ್ ಕಚೇರಿವರೆಗೆ ವಿದ್ಯಾರ್ಥಿಗಳೆಲ್ಲಾ ನಡೆದುಕೊಂಡೆ ಹೋಗಿದ್ದಾರೆ. ನಾರಬಂದ ತಾಂಡಾ, ಹುಣಚೇಡ್, ಅಲ್ಕೋಡ್, ಶಾವಮನತಗಲ್, ಹೊಡಹಟ್ಟಿ ಸೇರಿದಂತೆ ಹತ್ತು ಗ್ರಾಮಗಳಿಂದ ವಿದ್ಯಾರ್ಥಿಗಳು ಓದೋಕೆ ಅಂತಾನೆ ಸಿರವಾರಗೆ ಹೋಗಬೇಕು.

ಆದ್ರೆ ಹತ್ತು ಗ್ರಾಮಗಳಿಗೆ ಇರೋದು ಒಂದೇ ಬಸ್. ಆ ಬಸ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಹತ್ತಿ ಶಾಲೆ ಸೇರಬೇಕು. ದಿನ ನಿತ್ಯ ತಳ್ಳಾಟ, ನೂಕಾಟ ನಡೆಯುತ್ತಲೆ ಇರುತ್ತೆ, ಡೋರ್‌ನಲ್ಲೇ ನಿಂತು ವಿದ್ಯಾರ್ಥಿಗಳು ಸಿರವಾರ ಸೇರುತ್ತಿದ್ದಾರೆ. ಸಂಬಂಧ ಪಟ್ಟವರ ಗಮನಕ್ಕೆ ತಂದು, ಮತ್ತಷ್ಟು ಬಸ್ ಗಳ ಅವಕಾಶ ಕಲ್ಪಿಸಿಕೊಡಿ ಅಂತ ಅದೆಷ್ಟೆ ಬಾರಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ವಿದ್ಯಾರ್ಥಿಗಳೆಲ್ಲಾ ಸೇರಿ ತಹಶೀಲ್ದಾರ್ ಕಚೇರಿಗೆ ನಡೆದೆ ಹೋಗಿದ್ದಾರೆ. ಬಸ್ ಗಾಗಿ ಮತ್ತೆ ಮನವಿ ಮಾಡಿದ್ದಾರೆ. ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

