ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 28 : ರಾಜ್ಯ ಕಾಂಗ್ರೆಸ್ ಸರ್ಕಾರ ಇತಿಹಾಸದಲ್ಲಿಯೇ ಕಂಡರಿಯಂದಂತ ಭ್ರಷ್ಠಾಚಾರದಲ್ಲಿ ತೊಡಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಐದು ಉಚಿತ ಗ್ಯಾರೆಂಟಿಗಳಿಗೆ ಹಣ ಸಾಕಾಗದ ಕಾರಣ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಬಳಸಿಕೊಂಡಿದೆ. ಬೇನಾಮಿ ಖಾತೆಗಳನ್ನು ತೆರೆದು 187 ಕೋಟಿ ರೂ.ಗಳನ್ನು ವರ್ಗಾಯಿಸಿ ಅಲ್ಲಿಂದ ರಾಜ್ಯ ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿ ನೆರೆಯ ಆಂಧ್ರಕ್ಕೆ ಹಣ ರವಾನಿಸಿದೆ ಎಂದು ಆಪಾದಿಸಿದರು.
ಬಾರ್‍ನಲ್ಲಿ ಕುಳಿತು ಕುಡಿಯುವವರಿಗೂ ಹಣ ತಲುಪಿದೆ. ಇಂತಹ ಕಡು ಭ್ರಷ್ಟ ಸರ್ಕಾರಕ್ಕೆ ಕಿವಿ ಹಿಂಡಬೇಕಿದೆ ಎಂದರು.
ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ನೂರಾರು ಕೋಟಿ ರೂ.ಗಳನ್ನು ನೀಡಿದ್ದರು. ಆ ಹಣವನ್ನೆಲ್ಲಾ ಈಗಿನ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಎಸ್.ಐ.ಟಿ. ತನಿಖೆ ನಡೆಸುತ್ತಿದೆಯೇ ವಿನಃ ಸಚಿವ ನಾಗೇಂದ್ರಗೆ ಇದುವರೆವಿಗೂ ಒಂದು ನೋಟಿಸ್ ಕೊಟ್ಟಿಲ್ಲ. ಬೇರೆ ಬೇರೆ ರಾಜ್ಯಗಳಿಗೆ, ರಾಹುಲ್‍ಗಾಂಧಿಗೆ ಹಣ ಹೋಗಿದೆ.
ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ಗ್ಯಾರೆಂಟಿಗಳಿಗೆ ಹಣ ಒದಗಿಸಲು ಹೆಣಗಾಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಕೂಡ ಹಗರಣದಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಬರಗಾಲವಿದೆ. ರೈತರು ಕಂಗಾಲಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್ ಡೆತ್‍ನೋಟ್‍ನಲ್ಲಿ ಸಚಿವರ ಹೆಸರು ಬರೆದಿದ್ದಾರೆ. ಎಸ್ಸಿ.ಪಿ. ಟಿಎಸ್ಸ್‍ಪಿ. ಹಣ ದುರುಪಯೋಗವಾಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರ್ಲಗುಂಟೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಾಲ್ಮೀಕಿ ಜನಾಂಗದ ಹಣವೇ ಬೇಕಿತ್ತ. 187 ಕೋಟಿ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರದಲ್ಲಿ ತೊಡಗಿದೆ. ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ವಿ.ರಾಮಚಂದ್ರಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಕಾರ್ಯದರ್ಶಿ ಶರಣ್‍ತಾಳಿಕೆರೆ, ಎಸ್.ಲಿಂಗಮೂರ್ತಿ, ಉಮೇಶ್‍ಕಾರಜೋಳ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಹನುಮಂತೆಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಯುವ ಮುಖಂಡರುಗಳಾದ ಎಂ.ಸಿ.ರಘುಚಂದನ್, ಕುಮಾರಸ್ವಾಮಿ, ಜಿ.ಎಸ್.ಅನಿತ್‍ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಡಾ.ಸಿದ್ದಾರ್ಥ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಧುರಿ ಗಿರೀಶ್, ಜಿ.ಟಿ.ಸುರೇಸ್‍ಸಿದ್ದಾಪರ, ಪಿ.ಸಂಪತ್‍ಕುಮಾರ್, ಬಾಳೆಕಾಯಿ ರಾಂದಾಸ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸರಿಂದ ಕಾರ್ಯಕರ್ತರ ಬಂಧನ : ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂದಾಳತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರನ್ನು ಹಿಮ್ಮೆಟ್ಟಿಸಿ ಮುತ್ತಿಗೆ ಯತ್ನ ವಿಫಲಗೊಳಿಸಿದ ಪೊಲೀಸರು ಕೆಲವರನ್ನು ಬಂಧಿಸಿ ಬಸ್‍ನಲ್ಲಿ ಕರೆದೊಯ್ದುರು.
ಬೆಳಿಗ್ಗೆಯಿಂದಲೇ ಒನಕೆ ಓಬವ್ವ ವೃತ್ತದ ಸುತ್ತಲೂ ಬ್ಯಾರಿಕೇಡ್‍ಗಳನ್ನಿಟ್ಟು ಪೊಲೀಸರು ಸರ್ಪಗಾವಲಾಗಿ ನಿಂತಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರನ್ನು ತಡೆದು ಪ್ರಶ್ನಿಸಿ ಹಿಂದಕ್ಕೆ ಕಳಿಸುತ್ತಿದ್ದರು. ಟೌನ್ ಕೋ-ಆಪರೇಟಿವ್ ಸೊಸೈಟಿ ಮುಂಭಾಗ, ವಾಸವಿ ಸರ್ಕಲ್, ಡಿ.ಸಿ.ಸಿ.ಬ್ಯಾಂಕ್ ಎದುರು, ಜಿಲ್ಲಾಧಿಕಾರಿ ಬಂಗಲೇ ಮುಂಭಾಗ ಡಿ.ಸಿ.ಕಚೇರಿ ಎದುರು ಬ್ಯಾರಿಕೇಡ್‍ಗಳನ್ನಿಟ್ಟು ಪೊಲೀಸರು ಕಾವಲು ಕಾಯುತ್ತಿದ್ದರು. ಇಷ್ಟೆಲ್ಲದರ ನಡುವೆ ಕೆಲವರು ಚಾಲುಕ್ಯ ಹೊಟಲೇ ಮುಂಭಾಗ ಟೈರ್‍ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮದಕರಿನಾಯಕ ಪ್ರತಿಮೆ ಮುಂಭಾಗದಿಂದ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಧಾವಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಇಪ್ಪತ್ತು ನಿಮಿಷಗಳಿಗೂ ಹೆಚ್ಚು ಕಾಲ ನೂಕಾಟ, ತಳ್ಳಾಟವಾಯಿತು. ತೋಳ್ಬಲದ ಶಕ್ತಿಯನ್ನೆಲ್ಲಾ ಬಳಸಿದ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ಬಿಜೆಪಿ.ಯವರಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಆಸ್ಪದ ಕೊಡಲಿಲ್ಲ. ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಹಾಗೂ ಹನುಮಂತೆಗೌಡ ಇವರುಗಳು ಬ್ಯಾರಿಕೇಡ್‍ಗಳನ್ನು ಏರಿ ಡಿ.ಸಿ.ಕಚೇರಿಗೆ ನುಗ್ಗಲು ಸಾಕಷ್ಟು ಕಸರತ್ತು ನಡೆಸಿದರೂ ಪೊಲೀಸರು ಅವಕಾಶ ಕೊಡಲಿಲ್ಲ. ಪ್ರತಿಭಟನಾಕಾರರ ಸಿಳ್ಳೆ, ಕೇಕೆ ಮುಗಿಲು ಮುಟ್ಟುವಂತಿತ್ತು.
ನಾಲ್ಕು ಕೆ.ಎಸ್.ಆರ್.ಟಿ.ಸಿ. ಬಸ್, ಐದಕ್ಕೂ ಹೆಚ್ಚು ಪೊಲೀಸ್ ವ್ಯಾನ್, ಅಗ್ನಿಶಾಮಕ ವಾಹನ, ಅಂಬ್ಯುಲೆನ್ಸ್ ಇಷ್ಟೆಲ್ಲಾ ವಾಹನಗಳು ಒನಕೆ ಓಬವ್ವ ವೃತ್ತದ ಸುತ್ತಲೂ ನಿಂತಿದ್ದವು.