ಬೆಂಗಳೂರು: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದ ಚಂದ್ರಶೇಖರ ಸ್ವಾಮೀಜಿ, ಇದೀಗ ಆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ವಿಶ್ಚ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ, ಕಾರ್ತಿಕ್ರಮದಲ್ಲಿ ನಾನು ಮಾತನಾಡಿದ್ದು ವೈಜ್ಞಾನಿಕವಾಗಿ ಅಷ್ಟೇ. ಸಿಎಂ ವಿಚಾರವಲ್ಲದೇ ಬೇರೆ ಮೂರೂ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೆ. ಅದರಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆಯೂ ಮಾತನಾಡಿದ್ದೆ. ಕೆಂಪೇಗೌಡ ಜಯಂತಿಯ ದಿನ ನಾನು ಆಡಿದ ಮಾತುಗಳಿಗೆ ನಾನು ಈಗಲೂ ಬದ್ಧವಾಗಿದ್ದೇನೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕಾಗಿ ಮೊದಲಿನಿಂದಲೂ ಕಷ್ಟಪಟ್ಟಿದ್ದಾರೆ. 135 ಸೀಟು ಬರಬೇಕು ಎಂದರೆ ಡಿಕೆ ಶಿವಕುಮಾರ್ ಅವರ ಪರಿಶ್ರಮ ಸಾಕಷ್ಟಿದೆ. ಇವರ ಪರಿಶ್ರಮ ಬಹಳ ಇದೆ. ಹಾಗೇ ಬಹಳ ದಿನಗಳಿಂದಾನೂ ಸಿಎಂ ಆಗಬೇಕೆಂಬ ಆಸೆ ಅವರಲ್ಲೂ ಇದೆ. ಅವರು ಸಿಎಂ ಆದರೆ ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಾಗಿ ವೇದಿಕೆ ಮೇಲೆಯೂ ಅದನ್ನೇ ಹೇಳಿದೆ ಎಂದಿದ್ದಾರೆ.
ಅಂದು ನಾನು ಮಾತನಾಡಿದ್ದಿದ್ದು ಬೆಂಗಳೂರು ವಿಭಜನೆಯ ಬಗ್ಗೆ. ಬೆಂಗಳೂರನ್ನು 3 ಅಥವಾ 5 ಭಾಗ ಮಾಡುವುದು ಬೇಡ ಎಂಬ ವಿಚಾರದ ಬಗ್ಗೆಯೂ ಮಾತನಾಡಿದ್ದೆ. ಕೆಂಪೇಗೌಡರೆಂದರೆ ಬೆಂಗಳೂರು ಬೆಂಗಳೂರು ಎಂದರೆ ಕೆಂಪೇಗೌಡರು. ಆದ್ದರಿಂದ ಬೆಂಗಳೂರು ವಿಭಜನೆ ಮಾಡಿದರೆ ಕೆಂಪೇಗೌಡರ ಹೆಸರು ಹೋಗುತ್ತದೆ. ಕೆಂಪೇಗೌಡ ಉಳಿಯಬೇಕಾದರೆ ಬೆಂಗಳೂರು ಒಂದಾಗಿರಬೇಕು ಎಂದಿದ್ದೆ.
ಎರಡನೇಯ ಅಂಶವೆಂದರೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎರಡು ಭಾಗ ಆಗಬೇಕು ಎಂಬುದು. ಎರಡು ಭಾಗ ಆದಾಗ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದಿದ್ದಾರೆ.