ಅರಣ್ಯದಿಂದ ಮನುಕುಲಕ್ಕೆ ಆಗುವ ಸೇವೆ ಅಗಣಿತ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

2 Min Read

ವಿಶೇಷ ಲೇಖನ :

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಮೊಬೈಲ್ ಸಂಖ್ಯೆ : 94483 38821

 

ಸುದ್ದಿಒನ್

ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಮತ್ತು ಇತರೆ ಜಿಲ್ಲೆಗಳು ಈ ಹಿಂದೆ ಬರಪೀಡಿತಕ್ಕೊಳಗಾಗುತ್ತಿರುವುದು ತಮಗೆ ಗೊತ್ತಿರುವಂತಹ ವಿಚಾರ. ಆದುದರಿಂದ ಮನುಕುಲಕ್ಕೆ ಅರಣ್ಯದಿಂದ ಆಗುವ ಉಪಯೋಗಗಳನ್ನು ಕೆಳಗೆ ವಿವರಿಸಲಾಗಿದೆ. ದಯಮಾಡಿ ತಾವುಗಳು ಕೆಳಗಿನ ಅಂಶಗಳನ್ನು ಪರಿಶೀಲಿಸಿ ಅರಣ್ಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲು ವಿನಂತಿಸಲಾಗಿದೆ.

ಪರಿಸರದ ಎಲ್ಲಾ ರೀತಿಯ ಮಾಲಿನ್ಯ ನಿಯಂತ್ರಣದಲ್ಲಿಯೂ ಅರಣ್ಯ ಪಾತ್ರವಿರುವುದನ್ನು ನಾವು ಕಾಣಬಹುದು. ಸಂಪೂರ್ಣ ಭೂಮಿಯ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಕಾಡುಗಳು ಬಹಳ ಮುಖ್ಯ ನಮ್ಮೆಲ್ಲರ ಮೂಲಭೂತ ಅವಶ್ಯಕತೆಗಳಾದ ಶುದ್ಧವಾದ ಗಾಳಿ, ನೀರು, ಆಹಾರ, ವಸತಿ ಮುಂತಾದವುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅರಣ್ಯಗಳನ್ನೇ ಅವಲಂಭಿಸಿದೆ. ಒಂದು ಬೆಳೆದ ಮರ 200 ಜನರಿಗೆ ಬೇಕಾಗುವಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಕಾಡಿನ ಸಸ್ಯಗಳು ಧೂಳಿನ ಕಣಗಳನ್ನು ಸೋಸಿ ಗಾಳಿಯನ್ನು ಶುದ್ಧಗೊಳಿಸುತ್ತದೆ.

ಕಾಡಿನ ಮರಗಳ ಮೇಲೆ ಬಿದ್ದ ಮಳೆಯ ಹನಿಗಳನ್ನು ಎಲೆಗಳು ತಡೆದು ಅದರ ರಭಸವನ್ನು ಕಡಿಮೆ ಮಾಡುವುದರಿಂದ ಮಳೆಯ ನೀರಿ£ಗೆ ಮಣ್ಣು ಕೊಚ್ಚಿಹೋಗುವುದಿಲ್ಲ. ಇದರೊಂದಿಗೆ ಕಾಡಿನ ಮರಗಳ ಬೇರುಗಳು ಕೂಡ ಮಣ್ಣನ್ನು ಹಿಡಿದಿಡುತ್ತವೆ. ಹಾಗೂ ನೆಲದ ಸಚ್ಛಿದ್ರತೆಯನ್ನು ಹೆಚ್ಚಿಸುವುದರಿಂದ ನೀರು ಭೂಮಿಯ ಆಳಕ್ಕೆ ಇಳಿದು ಅಂತರ್ಜಲದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಅರಣ್ಯಗಳು ಮಳೆ ಪ್ರಮಾಣವನ್ನು ಹೆಚ್ಚಿಸಿ, ಬಿಸಿಲಿನ ತಾಪವನ್ನು ಕಡಿಮೆ ಮಾಡುತ್ತವೆ. ಕಾಡಿನಲ್ಲಿ ಬೆಳೆಯುವ ಹಣ್ಣು ಹಂಪಲುಗಳು ನೇರವಾಗಿ ಮನುಷ್ಯನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಕಾಡಿನಲ್ಲಿ ಬೆಳೆಯುವ ಔಷಧಿಯ ಸಸ್ಯಗಳು ಇಂದೂ ಸಹ ಶೇ. 60 ಕ್ಕಿಂತ ಹೆಚ್ಚು ಜನರಿಗೆ ಔಷಧಗಳನ್ನು ಒದಗಿಸುತ್ತವೆ. ಅರಣ್ಯಗಳಲ್ಲಿರುವ ಗಿಡಮರಗಳು ಭೂಮಿಯಲ್ಲಿರುವ ನೀರಿನ ಅಂಶವನ್ನು ಹೀರಿಕೊಂಡು ಆವಿಯ ರೂಪಕ್ಕೆ ತಂದು, ವಾತಾವರಣಕ್ಕೆ ಬಿಡುವುದರ ಮೂಲಕ ಮೋಡಗಳನ್ನುಂಟು ಮಾಡಿ ಮಳೆ ಬೀಳುವಿಕೆಗೆ ಕಾರಣವಾಗುತ್ತದೆ. ಆದುದರಿಂದಲೇ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವುದನ್ನು ಕಾಣುತ್ತೇವೆ.

ಅರಣ್ಯಗಳು ಫಲವತ್ತಾದ ಮಣ್ಣು ನಾಶವಾಗುವಂತೆ ರಕ್ಷಿಸುವುದರ ಜೊತೆಗೆ ಮರಗಳಿಂದ ಉದುರಿದ ಎಲೆಗಳು ಮಣ್ಣಿನ ಪದರಕ್ಕೆ ಸಾವಯವ ಪದಾರ್ಥಗಳನ್ನು ಸೇರಿಸಿ ಮಣ್ಣಿನ ಹೆಚ್ಚಳವನ್ನು ಉಂಟು ಮಾಡುತ್ತವೆ. ಇದರಿಂದ ನಮ್ಮ ಭೂಮಿಯ ಮೇಲೆ ಕಾಡುಗಳು ಹೆಚ್ಚಿದಷ್ಟೂ ಭೂಮಿಯ ಸಾರ ಹೆಚ್ಚುತ್ತದೆ. ಸಾವಿರಾರು ಕ್ರಿಮಿಕೀಟಗಳು ತಮ್ಮ ಆಹಾರಕ್ಕಾಗಿ ನಮ್ಮ ಬೆಳೆಗಳನ್ನು ನಾಶ ಮಾಡುತ್ತವೆ. ಅವುಗಳನ್ನು ನಾಶ ಮಾಡಲು ನಾವು ರಾಸಾಯನಿಕ ಕೀಟನಾಶಕಗಳನ್ನು ಬಳಸುತ್ತೇವೆ. ಈ ರಾಸಾಯನಿಕ ಕೀಟನಾಶಕಗಳ ಹೆಚ್ಚಿದ ಬಳಕೆ ನಮ್ಮ ಆಹಾರ, ನೆಲ, ವಾಯು ಎಲ್ಲವನ್ನು ವಿಷಮಯವಾಗಿಸುತ್ತವೆ. ಆದುದರಿಂದ ಕಾಡಿನ ಇರುವಿಕೆ ಇವೆಲ್ಲವನ್ನು ಸಮತೋಲದಲ್ಲಿ ಇರಿಸಬಹುದು.

ಕಾಡಿನಿಂದ ಮನುಕುಲಕ್ಕೆ ಆಗುವ ಸೇವೆ ಅಗಣಿತ. ಅದು ಪ್ರಕೃತಿ ನಮಗೆ ನೀಡಿರುವ ವರದಾನವೆಂದೇ ಭಾವಿಸಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಅರಣ್ಯ ಬೆಳೆಸುವಲ್ಲಿ ಪ್ರಾಯೋಜಿತ ಯೋಜನೆಗಳನ್ನು ಹಳ್ಳಿಯ ಜನಗಳಲ್ಲಿ ಉತ್ತೇಜಿಸಿದ್ದೇ ಆದರೆ, ಇನ್ನೊಂದು ದಶಮಾನದಲ್ಲಿ ಅರಣ್ಯ ವೃದ್ಧಿ ಅರ್ಥಪೂರ್ಣವಾಗುತ್ತದೆ. ಇದು ಆಧ್ಯತೆಯ ಮೇರೆಗೆ ಆಗಬೇಕಾಗಿರುವ ಕೆಲಸ. ಚಿತ್ರದುರ್ಗಜಿಲ್ಲೆಯಲ್ಲಿ ಸಾಕಷ್ಟು ಹುಲ್ಲುಗಾವಲುಗಳು ಮತ್ತು ಖಾಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಿ ಪರಿಸರವನ್ನು ಸಮತೋಲನಕ್ಕೆ ಪ್ರಯತ್ನ ಪಡುವುದು ಪ್ರತಿಯೊಬ್ಬರ ಜವಾಬ್ದಾರಿ.

Share This Article
Enable Notifications OK No thanks