ಚಿತ್ರದುರ್ಗ, (ಮೇ.27): ಇಂದು ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿಯ ನೇಮಕವಾಗಿದೆ. ಮುರುಘಾಮಠದ ಸಿರಸಂಗಿ ಮಹಾಲಿಂಗ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪಟ್ಟಾಭಿಷೇಕ ಕಾರ್ಯಕ್ರಮ ಮಾಡಲಾಗಿದೆ. ಬಸವಾದಿತ್ಯ ಶ್ರೀ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮುರುಘಾಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಉತ್ತರಾಧಿಕಾರಿಯನ್ನು ಘೋಷಿಸಿದರು. ಬಸವಾದಿತ್ಯ ಶ್ರೀ ಅವರಿಗೆ ರುದ್ರಾಕ್ಷಿ ಮಾಲೆ ಧರಿಸಿ, ಹೂವಿನ ಅಕ್ಷತೆ ಹಾಕುವ ಮೂಲಕ ಆಶೀರ್ವಾದ ಮಾಡಿದ್ದಾರೆ.
ಇನ್ನು ನೂತ ಉತ್ತಾರಾಧಿಕಾರಿಯಾಗಿರುವ ಬಸವಾದಿತ್ಯ ಶ್ರೀಗಳು, ಚಿತ್ರದುರ್ಗ ಜಿಲ್ಲೆ ಹುಲ್ಲೂರು ಗ್ರಾಮದವರು. ಚಂದ್ರಕಲಾ ಮತ್ತು ಶಿವಮೂರ್ತಿಯ ಎರಡನೇ ಪುತ್ರ. ಕಳೆದ ಒಂದು ವರ್ಷದಿಂದ ಮಠದ ಗುರುಕುಲದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮುರುಘಾಮಠದ ಕಾಲೇಜಿನಲ್ಲಿಯೇ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಬಸವಾದಿತ್ಯ ಅವರ ದೊಡ್ಡಮ್ಮ ದ್ರಾಕ್ಷಾಯಿಣಮ್ಮ ಮುರುಘಾಮಠದ ಪರಮಭಕ್ತರಾಗಿದ್ದಾರೆ. ಶಿವಮೂರ್ತಿ ಮುರುಘಾ ಶರಣರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಹೀಗಾಗಿ ಮಠದ ಲಿಂಕ್ ಬಸವಾದಿತ್ಯ ಅವರಿಗೂ ಹೆಚ್ಚಾಗಿದೆ. ಇನ್ನು ನೂತನ ಉತ್ತಾರಾಧಿಕಾರಿಯಾಗಿ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.