ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ಇದೇ ಸೆಪ್ಟೆಂಬರ್ 21 ರ ಭಾನುವಾರ ನಡೆಯಲಿರುವ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹಾಗೂ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.
ಅಂದು ರಾತ್ರಿ 11 ರಿಂದ ಬೆಳಗಿನ ಜಾವ 3.30 ರವರೆಗೆ ಈ ಗ್ರಹಣವು ಸಂಭವಿಸಲಿದ್ದು, ಯಾವುದೇ ರೀತಿಯ ಆಚರಣೆಗಳನ್ನು ನಡೆಸುವುದು ಸೂಕ್ತವಲ್ಲ. ಇದೊಂದು ಆಕಾಶದಲ್ಲಿ ನಡೆಯಲಿರುವ ನೆರಳು ಬೆಳಕಿನ ಆಟವಾಗಿದ್ದು, ಸೂರ್ಯ, ಭೂಮಿಯ ನಡುವೆ ಚಂದ್ರ ಬಂದು ಸೂರ್ಯನನ್ನು ಮರೆ ಮಾಡುವ ಪ್ರಕ್ರಿಯೆ ಅಷ್ಟೆ. ಅದು ಈ ಬಾರಿ ನಡೆಯುವ ಗ್ರಹಣವು ಭಾಗಶಃ ಸೂರ್ಯಗ್ರಹಣ. ಸೂರ್ಯನ ಸ್ವಲ್ಪ ಭಾಗವನ್ನು ಮಾತ್ರ ಚಂದ್ರ ಆವರಿಸುವ ಪ್ರಕ್ರಿಯೆ. ಇದು ಈ ಬಾರಿ ಪೂರ್ವ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫೆಸಿಫಿಕ್ ಸಾಗರ ಹಾಗೂ ಅಂಟಾರ್ಟಿಕಾದಲ್ಲಿ ನಡೆಯುವುದರಿಂದ ನಾವು ಯಾವುದೇ, ಭಯ, ಆತಂಕಕ್ಕೆ ಒಳಗಾಗುವುದು ಬೇಡ. ಇದರಿಂದ ಜನಸಾಮಾನ್ಯರಿಗೆ, ಪ್ರಾಣಿ ಪಕ್ಷಿಗಳ ಮೇಲೆಯೂ ಪರಿಣಾಮವಿಲ್ಲ. ಮೌಢ್ಯತೆಯನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಎಚ್.ಎಸ್.ಟಿ.ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
