ಚಿತ್ರದುರ್ಗ,(ಮಾರ್ಚ್.23) : ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಪತ್ತೆ ಹಚ್ಚಿ ಚಿಕಿತ್ಸೆ, ಆರೈಕೆ ಮಾಡಲು ಎಲ್ಲಾ ವೈದ್ಯಾಧಿಕಾರಿಗಳು ತಮ್ಮ ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ತಂಡಗಳನ್ನು ರಚಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಒಂದು ದಿನದ ಅಪೌಷ್ಠಿಕತೆ ಹೊಂದಿದ ಮಕ್ಕಳನ್ನು ಪತ್ತೆ ಹಚ್ಚುವ ಕೌಶಲ್ಯ ಮತ್ತು ಶಿಶು ಮರಣ ತಾಯಿ ಮರಣ ನಿಯಂತ್ರಣದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಯಿ ಮರಣ ಶಿಶು ಮರಣಗಳನ್ನು ನಿಯಂತ್ರಿಸಲು ಕ್ರಿಯಾತ್ಮಕವಾಗಿ ಕರ್ತವ್ಯ ನಿರ್ವಹಿಸಿ, ಈ ತರಬೇತಿಯಲ್ಲಿ ನಿಮ್ಮ ಕೌಶಲ್ಯವನ್ನು ಹೆಚ್ಚು ಬಲಪಡಿಸಿಕೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ತಾಯಿ ಮರಣ ಶಿಶು ಮರಣ ಸರಿಪಡಿಸುವ ಸಾರ್ವಜನಿಕ ಆರೋಗ್ಯ ಸೇವೆ ಶೀಘ್ರ ಗರ್ಭಿಣಿ ನೋಂದಣಿ, ತಾಯಿ ಕಾರ್ಡ್ ವಿತರಣೆ, ಗರ್ಭಿಣಿ ಆರೈಕೆಯ ಸೇವೆ ನೀಡುವುದು ಗರ್ಭಾವಧಿಯಲ್ಲಿ ಕನಿಷ್ಠ ನಾಲ್ಕು ಬಾರಿ ಭೇಟಿ ನೀಡಬೇಕು ಎಂದು ಸೂಚಿಸಿದರು.
ಕಬ್ಬಿಣಾಂಶದ ಮಾತ್ರೆ, ಕ್ಯಾಲ್ಸಿಯಂ ಮಾತ್ರೆ, ಟಿ.ಟಿ.ಚುಚ್ಚುಮದ್ದು ನೀಡುವುದು, ಪೌಷ್ಟಿಕ ಆಹಾರದ ಬಗ್ಗೆ ಶಿಕ್ಷಣ ಒದಗಿಸುವುದು. ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನಗಳಲ್ಲಿ ಗರ್ಭಿಣಿಯರು ಭಾಗವಹಿಸಿವಂತೆ ಮಾರ್ಗದರ್ಶನ ನೀಡುವುದು, ಕಾಲ ಕಾಲಕ್ಕೆ ಮಕ್ಕಳಿಗೆ ದೈನಂದಿನ ಲಸಿಕೆ ನೀಡುವುದು ಮಕ್ಕಳ ಬೆಳವಣಿಗೆ ಪಟ್ಟಿ ದಾಖಲಿಸುವುದು. ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ಸೇವೆ ಸಿಗುವಂತೆ ಮಾಡಿ ಎಂದರು.
ಬೆಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ಹಾಗೂ ಮಕ್ಕಳ ತಜ್ಞರಾದ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಶಿಶು ಮರಣ ದರ 24/1000, ಜೀವಂತ ಜನನಕ್ಕೆ, ತಾಯಿ ಮರಣ ದರ 108/1 ಲಕ್ಷ ಇರುತ್ತದೆ. ಗರ್ಭಿಣಿ ಆರೈಕೆ, ಮನೆ ಭೇಟಿ, ಕಾಲಕಾಲಕ್ಕೆ ತಪಾಸಣೆ ಪೌಷ್ಟಿಕಾಂಶಗಳ ಬಗ್ಗೆ ಶಿಕ್ಷಣ ಆಸ್ಪತ್ರೆ ಹೆರಿಗೆ ಸೇವಾಕ್ಷೇತ್ರಗಳನ್ನು ಬಲಪಡಿಸುವ ಬಗ್ಗೆ ಮಕ್ಕಳ ಆರೈಕೆ ಬಗ್ಗೆ ತರಬೇತಿಯನ್ನು ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.