ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.13) : ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಅರ್ಥಶಾಸ್ತ್ರದ ಪಾತ್ರ ಪ್ರಮುಖವಾದುದು. ಯುವ ಜನಾಂಗಕ್ಕೆ ಎಲ್ಲಾ ರಂಗಗಳಲ್ಲಿಯೂ ಇದರಿಂದ ಅವಕಾಶ ಸಿಗಲಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ತಿಳಿಸಿದರು.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಚಿತ್ರದುರ್ಗ ಹಾಗೂ ದಾವಣಗೆರೆ ವಿ.ವಿ.ಅರ್ಥಶಾಸ್ತ್ರ ಅಧ್ಯಾಪಕರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಅರ್ಥಶಾಸ್ತ್ರ ಪಠ್ಯಕ್ರಮ ವಿಶ್ಲೇಷಣೆಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರಮೋದಿರವರು ಕೌಶಲ್ಯ ಶಿಕ್ಷಣ ಹಾಗೂ ಸ್ವಾವಲಂಭಿತನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಯುವ ಪೀಳಿಗೆಗೆ ಅನೇಕ ಉದ್ಯೋಗಾವಕಾಶಗಳು ಸಿಗುವಂತಾಗಲಿ ಎನ್ನುವ ಸದುದ್ದೇಶದಿಂದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ.
ಅನೇಕ ಸವಾಲು ಮತ್ತು ಸಾಧಕ-ಬಾಧಕಗಳ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ನೀತಿಯ ವಿರುದ್ದ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಡಿ ಅರ್ಥಶಾಸ್ತ್ರ ಉಪನ್ಯಾಕಸರ ಹಾಗೂ ಪ್ರಾಧ್ಯಾಪಕರುಗಳ ಮೇಲೆ ಮಹತ್ತರ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಎನ್ನುವ ತಪ್ಪು ಕಲ್ಪನೆ ಸರಿಯಲ್ಲ. ಶಿಕ್ಷಣದಲ್ಲಿ ಬದಲಾವಣೆ ತರುವುದು ಇದರ ಉದ್ದೇಶ. ಹಾಗಾಗಿ ಇದರ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು ಎಂದರು.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಸಂದೀಪ್ ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಡೀನರು ಆದ ಪ್ರೊ.ಕೆ.ಬಿ.ರಂಗಪ್ಪ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಸುಚಿತ್ರಾ ಎಸ್, ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವೇದಿಕೆ ಅಧ್ಯಕ್ಷ ಪ್ರೊ.ಭೀಮಣ್ಣ ಸುಣಗಾರ್, ಶ್ರೀಮತಿ ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಲತಾ ಎಸ್.ವೇದಿಕೆಯಲ್ಲಿದ್ದರು.