ಚಿತ್ರದುರ್ಗ : ಮಕ್ಕಳ ಮನಸ್ಸು ಚಂಚಲವಾದುದು. ಹಾಗಾಗಿ ಆಕರ್ಷಣೆ, ದುಶ್ಚಟಗಳಿಗೆ ಬೇಗ ಬಲಿಯಾಗುತ್ತಾರೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಮ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕಡಬನಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ಮನೆಯಲ್ಲಿ ಪೋಷಕರು ಹಾಗೂ ಶಾಲೆಯಲ್ಲಿ ಶಿಕ್ಷಕರುಗಳ ಮೇಲಿದೆ. ತಂಬಾಕು, ಮದ್ಯಪಾನ, ಧೂಮಪಾನದಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ರಕ್ತದೊತ್ತಡ, ಹೃದಯ ಬಡಿತ, ಬಾಯಿ ಹಲ್ಸರ್‍ಗೆ ತುತ್ತಾಗಬೇಕಾಗುತ್ತದೆ. ಪೌಷ್ಠಿಕಾಂಶ ಆಹಾರ, ಶುದ್ದವಾದ ಗಾಳಿ, ನೀರು ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಕ್ಕಳ ಎದುರು ಮನೆಯಲ್ಲಿ ಪೋಷಕರುಗಳು ಧೂಮಪಾನ ಮತ್ತು ಮದ್ಯಪಾನ ಮಾಡಿದರೆ ಮಕ್ಕಳು ದುಶ್ಚಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ತಿಳಿಸಿದರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆಂಜನೇಯ ಎಚ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಶೋಕ್ ಬಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲ್ಲೂಕು ಯೋಜನಾಧಿಕಾರಿಗಳು, ವಲಯ ಮೇಲ್ವಿಚಾರಕ ಮಧು, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾ, ಸೇವಾ ಪ್ರತಿನಿಧಿ ರತ್ನಮ್ಮ ಇವರುಗಳು ಮಾತನಾಡಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದಕ್ಕೆ ಕೆಲವೊಮ್ಮೆ ಮನೆಯಲ್ಲಿ ದೊಡ್ಡವರೆ ಕಾರಣರಾಗುತ್ತಾರೆ ಎಂದು ಹೇಳಿದರು.