ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, ಸುದ್ದಿಒನ್, (ಆ.23): ರಾಷ್ಟ್ರಧ್ವಜದಲ್ಲಿ ತ್ರಿವರ್ಣವಿರುವುದು ಅಪಶಕುನ ಎಂದು ಹೀಯಾಳಿಸುತ್ತಿದ್ದ ಬಿಜೆಪಿ.ಈಗ ಹರ್‍ಘರ್ ತಿರಂಗಾ ಎಂದು ಕೈಯಲ್ಲಿ ಝಂಡ್ ಹಿಡಿದುಕೊಂಡು ಓಡಾಡುತ್ತಿರುವುದು ದೇಶಭಕ್ತಿಗಾಗಿ ಅಲ್ಲ. ರಾಜಕೀಯ ಬೂಟಾಟಿಕೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪ್ರಧಾನಿ ನರೇಂದ್ರಮೋದಿಗೆ ತಿರುಗೇಟು ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ನಡೆದ ಕಾರ್ಯಕಾರಿಣಿ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಸೋನಿಯಾಗಾಂಧಿ ನನ್ನ ಮೇಲೆ ಮಹತ್ವರ ಜವಬ್ದಾರಿ ವಹಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಕ್ಕಾಗಿಯೇ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯರ ತ್ಯಾಗ, ಬಲಿದಾನವಿದೆ. ಬಿಜೆಪಿ.ಯಲ್ಲಿ ಯಾರು ದೇಶಕ್ಕಾಗಿ ಹೋರಾಡಿದವರಿಲ್ಲ. ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಬಿಜೆಪಿ.ವೈಫಲ್ಯವನ್ನು ಪ್ರತಿ ಮನೆ ಮನೆಗೆ ತಿಳಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಆ.19 ರಿಂದ ಕಲ್ಬುರ್ಗಿಯಿಂದ ಪ್ರವಾಸ ಆರಂಭಿಸಿ ರಾಜ್ಯಾದ್ಯಂತ ಸಂಚರಿಸುತ್ತೇನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ಮಠಗಳಿಗೆ ಭೇಟಿ ನೀಡಿ ಪಕ್ಷಕ್ಕೆ ಆಶೀರ್ವದಿಸುವಂತೆ ಕೇಳಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನುಳಿದ ಮಠಗಳಿಗೆ ಭೇಟಿ ಕೊಡುತ್ತೇನೆ. ಕಾಂಗ್ರೆಸ್‍ಗೆ ಭವ್ಯವಾದ ಇತಿಹಾಸವಿದೆ. ನೆಹರು, ಲಾಲ್‍ಬಹದ್ದೂರ್‍ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನ ಅಜಾದ್, ಗೋಪಾಲಕೃಷ್ಣ ಕೋಕುಲೆ, ಬಾಲಗಂಗಾಧರ್ ತಿಲಕ್ ಇವರುಗಳು ಪಕ್ಷಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ರಾಷ್ಟ್ರೀಯತೆ ಬಗ್ಗೆ ಬಿಜೆಪಿ.ಯವರು ನಮಗೆ ಪಾಠ ಹೇಳಿಕೊಡುವ ಅಗತ್ಯವಿಲ್ಲ.
ನಾಗ್‍ಪುರ್‍ನಲ್ಲಿರುವ ಆರ್.ಎಸ್.ಎಸ್.ಕಚೇರಿಯ ಮೇಲೆ ಐವತ್ತು ವರ್ಷಗಳಿಂದಲೂ ತ್ರಿವರ್ಣಧ್ವಜ ಹಾರಿಸಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿರವರ ಸೂಚನೆಯಂತೆ ರಾಷ್ಟ್ರಧ್ವಜ ಹಾರಿಸಿದ್ದ ಇವರಿಗೆ ದೇಶಭಕ್ತಿ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು.
ಡ್ಯಾಂ, ಕೆರೆ, ರಸ್ತೆ, ವಿಶ್ವವಿದ್ಯಾನಿಲಯಗಳು, ಕಂಪ್ಯೂಟರ್, ಮೊಬೈಲ್, ಎನ್.ಆರ್.ಇ.ಜಿ.ಇವುಗಳೆಲ್ಲಾ ಕಾಂಗ್ರೆಸ್ ಕೊಡುಗೆ ಎನ್ನುವುದನ್ನು ಜನರಿಗೆ ತಿಳಿಸಬೇಕಿದೆ. 2014 ಚುನಾವಣಾ ಪೂರ್ವದಲ್ಲಿ ದೇಶದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ನಂಬಿಸಿ ಕೊನೆಗೆ ಯುವಕರನ್ನು ಪಕೋಡ ಮಾರಿ ಎಂದು ಗೇಲಿ ಮಾಡಿದರು.
ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿ ಬಡವರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಹೇಳಿ ಅದನ್ನು ಈಡೇರಿಸಲಿಲ್ಲ. ಐದುನೂರು, ಒಂದು ಸಾವಿರ ರೂ.ಮುಖ ಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಆರ್ಥಿಕವಾಗಿ ದೇಶವನ್ನು ದಿವಾಳಿಯನ್ನಾಗಿಸಲು ಹೊರಟಂತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಪ್ರಧಾನಿ ಮೋದಿ ಸಾಧನೆ ಎಂದು ವ್ಯಂಗ್ಯವಾಡಿದರು.
ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಿದ್ದು, ಕಾಂಗ್ರೆಸ್. ಜಾತಿ, ಧರ್ಮಗಳ ನಡುವೆ ಕಿತ್ತಾಟ ಉಂಟು ಮಾಡುತ್ತಿರುವ ಬಿಜೆಪಿ.ಬಗ್ಗೆ ಜನ ಬೇಸತ್ತಿದ್ದು, ಕಾಂಗ್ರೆಸ್ ಕೈಹಿಡಿಯಲು ಸಿದ್ದರಾಗಿದ್ದಾರೆ. ಕಾರ್ಯಕರ್ತರು ಮುಖಂಡರುಗಳು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಎಂ.ಬಿ.ಪಾಟೀಲ್ ಕಾಂಗ್ರೆಸ್‍ಗೆ ಒಳ್ಳೆ ಮಟೀರಿಯಲ್, ಅನೇಕ ವೀರಶೈವ ನಾಯಕರನ್ನು ಬೆಳೆಸಿರುವುದು ಕಾಂಗ್ರೆಸ್ ಪಕ್ಷ. ಜನತೆಗೆ ಎಲ್ಲಾ ಯೋಜನೆಗಳನ್ನು ಕೊಟ್ವಿ. ಆದರೆ ಸೋತ್ವಿ. ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವುದರಲ್ಲಿ ಸೋತಿದ್ದೇವೆ. ಒಂದು ಕಾಲದಲ್ಲಿ ಬೀದಿಯಲ್ಲಿದ್ದವರು ಈಗ ದೊಡ್ಡ ಹೋಟೆಲ್, ರೆಸಾರ್ಟ್‍ಗಳಲ್ಲಿ ತಂಗುವಂತಾಗಿದ್ದಾರೆಂದರೆ ಎಷ್ಟು ಕೋಟಿಗಳನ್ನು ಲೂಟಿ ಹೊಡೆದಿರುಬಹುದೆನ್ನುವುದನ್ನು ನೀವುಗಳೆ ಊಹಿಸಿಕೊಳ್ಳಿ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
ಹೊಳಲ್ಕೆರೆ ಚಿತ್ರಣವನ್ನೇ ಬದಲಾಯಿಸಿದ್ದೇನೆ. ಚಿತ್ರದುರ್ಗದಲ್ಲಿ ಡಬ್ಬಲ್ ರೋಡ್ ಆಗಿದೆ ಎಂದರೆ ಅದು ಕಾಂಗ್ರೆಸ್ ನೀಡಿದ ವಿಶೇಷ ಅನುದಾನ. ಜನನಾಯಕರು ನಮ್ಮಲ್ಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ನಾವುಗಳು ಈಗ ಚುನಾವಣಾ ವರ್ಷದಲ್ಲಿದ್ದೇವೆ. ಕಾಂಗ್ರೆಸ್ ಪಕ್ಷದ ಸಾಧನೆ, ತತ್ವ ಸಿದ್ದಾಂತಗಳ ಕುರಿತು ದೇಶದಲ್ಲಿ ಯಾರು ತಕರಾರು ಮಾಡುವಂತಿಲ್ಲ. ಬಿಜೆಪಿ.ಬತ್ತಳಿಕೆ ಎಲ್ಲಾ ಖಾಲಿಯಾಗಿದೆ. ಜಾತಿ ಧರ್ಮಗಳ ನಡುವೆ ಘರ್ಷಣೆಯಿಡುತ್ತ ಕೋಮು ದ್ವೇಷ ಬಿತ್ತುತ್ತಿದ್ದಾರೆ. ನಾವುಗಳೆಲ್ಲರೂ ಒಗ್ಗಟ್ಟಾದರೆ ಬೇರೆ ಯಾವ ಪಕ್ಷಗಳು ನಮಗೆ ಸಾಟಿಯಲ್ಲ. ಜನ ಸಂಕಷ್ಟ ಆತಂಕದಲ್ಲಿದ್ದಾರೆ.
ಜಾತಿವಾದಿಗಳಿಂದ ಈಗ ಸ್ವಾತಂತ್ರ್ಯ ಪಡೆಯಬೇಕಿದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಹನುಮಲಿ ಷಣ್ಮುಖಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್. ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಜೆ.ಜೆಹಟ್ಟಿ ತಿಪ್ಪೇಸ್ವಾಮಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತನಂದಿನಿಗೌಡ, ಉಪಾಧ್ಯಕ್ಷ ಡಿ.ಟಿ. ವೆಂಕಟೇಶ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸವಿತಾರಘು ವೇದಿಕೆಯಲ್ಲಿದ್ದರು.
ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.