ಚಿತ್ರದುರ್ಗ, (ಡಿಸೆಂಬರ್.07) : ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿ ಅಲ್ಲಿನ ಕೆರೆ, ಕಟ್ಟೆಗಳು ಈಗಾಗಲೇ ತುಂಬಿದ್ದು ಇದರಿಂದ ವೇದಾವತಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಎಚ್ಚರಿಕೆ ನೀಡಿದ್ದಾರೆ.
ಕೆರೆ, ಕಟ್ಟೆಗಳು ತುಂಬಿದ್ದು ಅಲ್ಲಿನ ಹೆಚ್ಚುವರಿ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಬಿಡುಗಡೆ ಮಾಡುವ ನೀರು ಸಹ ಈ ನದಿ ಪಾತ್ರದಲ್ಲಿಯೇ ಹರಿಯುವುದರಿಂದ ಸಹಜವಾಗಿ ನೀರಿನ ಪ್ರಮಾಣ ಹೆಚ್ಚಿರುತ್ತದೆ.
ವಿ.ವಿ.ಸಾಗರ ಭರ್ತಿಗೆ 5.2 ಅಡಿ ಬಾಕಿ; ವಾಣಿ ವಿಲಾಸ ಜಲಾಶಯ ಡಿಸೆಂಬರ್ 7 ರ ವರೆಗೆ 124.80 ಅಡಿಗೆ ತಲುಪಿದ್ದು ಭರ್ತಿಗೆ 5.2 ಅಡಿ ಮಾತ್ರ ಬಾಕಿ ಇರುತ್ತದೆ. ಆದ್ದರಿಂದ ವೇದಾವತಿ ನದಿ ಪಾತ್ರದಲ್ಲಿ ಸಾರ್ವಜನಿಕರು ಇಳಿಯುವುದು, ನದಿಯ್ಲಿ ಸಂಚರಿಸುವುದು ಹಾಗೂ ಜಾನುವಾರುಗಳನ್ನು ಬಿಡುವುದನ್ನು ಮಾಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ