ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಐಸಿಯುನಲ್ಲಿದೆ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದೆ ಅವರ ಹೋರಾಟದಿಂದ ಸಂಪೂರ್ಣ ಅವಸಾನ ಆಗಲಿದೆ
ಹಾನಗಲ್ ಉಪ ಚುನಾವಣೆ ಹಿನ್ನೆಲೆ ಇದೇ ಅಕ್ಟೋಬರ್ 17 ರಂದು ಪ್ರಚಾರ ಕೈಗೊಳ್ಳುವೆ. ಅ.21, 22 ರಂದು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವೆ. 2 ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ಇನ್ನು, ಪ್ರಚಾರದಿಂದ ಬಿಎಸ್ವೈ ದೂರವಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನೂ ಸಮಯ ಇದೆ. ಅವರು ಪ್ರಚಾರ ಸಹ ಕೈಗೊಳ್ಳುತ್ತಾರೆ ಎಂದರು. ಡಿ.ಕೆ. ಶಿವಕುಮಾರ ವಿರುದ್ಧ ಉಗ್ರಪ್ಪ ಹಾಗೂ ಸಲೀಂ ಆರೋಪ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ತಂತ್ರ ಕುತಂತ್ರ ನಡೆದಿವೆ. ಎಲ್ಲವನ್ನೂ ಆರೋಪ ಮಾಡಿ ಆಮೇಲೆ ಕ್ಷಮೆ ಕೇಳಿದ್ರೆ ಹೇಗೆ? ಎಂದು ಶೆಟ್ಟರ್ ಪ್ರಶ್ನೆ ಮಾಡಿದರು.
ಕಾಂಗ್ರೆಸ್ನಲ್ಲಿ ಎರಡು ಗುಂಪುಗಳಿವೆ. ಒಂದು ಸಿದ್ದರಾಮಯ್ಯ ಹಾಗೂ ಮತ್ತೊಂದು ಡಿಕೆ ಗುಂಪು. ಅವರ ಮಧ್ಯೆ ಸಿಎಂ ಹುದ್ದೆಗೆ ಪೈಟ್ ಶುರುವಾಗಿದೆ. ಉಗ್ರಪ್ಪ, ಸಿದ್ದರಾಮಯ್ಯರ ಪಟ್ಟದ ಶಿಷ್ಯ, ಅವರೇ ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ. ಡಿಕೆಶಿ ಬಗ್ಗೆ ಅವಹೇಳನ ಮಾಡಲು ಸಿದ್ದರಾಮಯ್ಯ ಬೆಂಬಲಿಗರು ನಿಂತಿದ್ದಾರೆ. ಕಾಂಗ್ರೆಸ್ ಪಕ್ಷ ಅವಸಾನದತ್ತ ಸಾಗಿದೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿಕೆಶಿ ಆಸ್ತಿ ವಿಚಾರವಾಗಿ ಸೊಗಡು ಶಿವಣ್ಣ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಅವರವರ ಅಭಿಪ್ರಾಯ ಅವರು ಹೇಳುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದು ಸೂಕ್ತ ಅಲ್ಲ ಎಂದರು.