ಹೊಳಲ್ಕೆರೆ : ಸಾಹಿತ್ಯ ಕ್ಷೇತ್ರಕ್ಕೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ಪುರಸಭೆ ಅಧ್ಯಕ್ಷ ಆರ್.ಎ. ವರದರಾಜ್ ಹೇಳಿದ್ದಾರೆ. ಅವರು ಪಟ್ಟಣದಲ್ಲಿ ಕಸಾಪ ಚುನಾವಣೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಜಾತಿ, ಧರ್ಮಗಳನ್ನು ಒಟ್ಟಾಗಿಸುವ ಶಕ್ತಿಯನ್ನು ಸಾಹಿತ್ಯ ಪರಿಷತ್ತು ಹೊಂದಿದೆ. ಆದ್ದರಿಂದ ಜಾತಿ, ಧರ್ಮ ಹಾಗೂ ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಪರಿಷತ್ತಿಗೆ ಶಕ್ತಿ ನೀಡಬೇಕು. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಹಿತ್ಯದ ಚಟುವಟಿಕೆಗಳು ಕಡಿಮೆಯಾಗಿವೆ. ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಸಂಖ್ಯೆಯ ಸದಸ್ಯರಾಗುವುದು ಅಗತ್ಯ.
ಪರಿಷತ್ತು ದೇಶದಲ್ಲಿ ಅತ್ಯಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಘಟನೆಯಾಗಿದೆ. ಹಿಂದಿನ ಅವಧಿಯಲ್ಲಿ ಕವಿಗಳು, ಸಾಹಿತಿಗಳು, ಸಂಘಟಕರು ಸಾಹಿತ್ಯದ ಕಂಪನ್ನು ನಾಡಿನಲ್ಲಿ ಪಸರಿಸಿದ್ದಾರೆ. ಇದೇ ಪ್ರವೃತ್ತಿ ಮುಂದುವರಿಯಬೇಕಾದ ಅಗತ್ಯವಿದೆ. ಹೊಳಲ್ಕೆರೆ ಪಟ್ಟಣದಲ್ಲಿ ಹಲವಾರು ಸಂಘಟನೆಗಳು ಸಾಹಿತ್ಯದ ಪರಿಸರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದರು.
ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್ತಿನಲ್ಲಿ ಶಿಕ್ಷಕರು ದೊಡ್ಡ ಪಾತ್ರ ವಹಿಸಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ತಾಲ್ಲೂಕು,ಜಿಲ್ಲಾ ಮಟ್ಟಗಳಲ್ಲಿ ಸಂಘಟನಾ ಶಕ್ತಿಯಾಗಿದ್ದಾರೆ. ಈ ಬಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಎಂ.ಶಿವಸ್ವಾಮಿ ಶಿಕ್ಷಕರಾಗಿ ಉತ್ತಮ ಸಾಧನೆಗಳನ್ನು ತೋರಿದ್ದಾರೆ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಮತದಾರರ ಮನೆಗಳಿಗೆ ತೆರಳಿ ಪ್ರಚಾರ ಕೈಗೊಳ್ಳಲಾಯಿತು.
ರಾಜ್ಯ ಪರಿಷತ್ತಿನ ಸದಸ್ಯ, ಅಣ್ಣೇಶ್, ಆರ್, ಎನ್. ರಶೀದ್, ನಾಗರಾಜ್, ರುದ್ರಸ್ವಾಮಿ, ಕಾಂತರಾಜ್, ಗಂಗಣ್ಣ, ದೇವರಾಜ್,ನಾಗೇಶ್ ಮತ್ತಿತರರಿದ್ದರು.