ಚಿತ್ರದುರ್ಗ: ಪ್ರಾಣಿ ಪಕ್ಷಿಗಳಿಗೆ ನೆನಪಿನ ಶಕ್ತಿ ಹೆಚ್ಚಾಗಿಯೇ ಇರುತ್ತೆ. ಹೀಗಾಗಿಯೇ ಎಲ್ಲಿಯೇ ಬಿಟ್ಟರು ಆ ಪ್ರಾಣಿ ಪಕ್ಷಿಗಳು ಮಾಲೀಕರನ್ನ ಅರಸಿ ಬಂದೇ ಬರುತ್ತವೆ. ಅಂಥಹದ್ದೇ ಘಟನೆ ಇದೀಗ ಚಿತ್ರದುರ್ಗದಲ್ಲಿ ನಡೆದಿದೆ. ಶಬರಿಮಲೆಗೆ ಹೋಗಿದ್ದ ಪಾರಿವಾಳ ಅರಸಿ ಚಿತ್ರದುರ್ಗಕ್ಕೆ ಬಂದಿದೆ. ಈ ಘಟನೆ ನೋಡಿ ಊರಿನ ಮಂದಿ ಆಶ್ಚರ್ಯಚಕಿತರಾಗಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ತಳವಾರಟ್ಟಿಯಲ್ಲಿ ಈ ಘಟನೆ ನಡೆದಿರುವಂತದ್ದು. ಈ ಪಾರಿವಾಳದ ಹೆಸರು ಮದಕರಿ. ತಳವಾರಹಟ್ಟಿಯ ರಾಜು ಎಂಬುವವರು ಸಾಕಿದ್ದ ಪಾರಿವಾಳ ಇದಾಗಿದೆ. ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಧಾರಿಗೆ ರಾಜು ಅವರು ಈ ಪಾರಿವಾಳವನ್ನ ನೀಡಿದ್ದರು. ಬಳಿಕ ಅಲ್ಲಿ ಈ ಪಾರಿವಾಳವನ್ನ ಹಾರಿ ಬಿಡಲು ಸೂಚನೆ ನೀಡಿದ್ದರು. ಅದರಂತೆ ಮಾಲಾಧಾರಿಯೊಬ್ಬರು ಡಿಸೆಂಬರ್ 31 ರಂದು ಪಾರಿವಾಳವನ್ನು ಶಬರಿಮಲೆಯಿಂದ ಹಾರಿ ಬಿಟ್ಟಿದ್ದರು. ಆ ಪಾರಿವಾಳ ಜನವರಿ 21 ರಂದು ಚಿತ್ರದುರ್ಗದ ತಳವಾರಹಟ್ಟಿಗೆ ಬಂದು ತಲುಪಿದೆ. ಸರಿಯಾಗಿ ಒಂದು ತಿಂಗಳ ಕಾಲ ಪಾರಿವಾಳ ಜರ್ನಿಯನ್ನ ಮಾಡಿದೆ.
ಈ ಪಾರಿವಾಳ ಬರೋಬ್ಬರಿ 900 ಕಿಲೋ ಮೀಟರ್ ಕ್ರಮಿಸಿ ಗೂಡು ಸೇರಿಕೊಂಡಿದೆ. ಇದು ಮಾಲೀಕನಿಗೆ ಮಾತ್ರ ಖುಷಿ ಕೊಟ್ಟಿರೋದಷ್ಟೇ ಅಲ್ಲ. ಇಡೀ ಗ್ರಾಮಸ್ಥರಿಗೆ ಖುಷಿ ನೀಡಿದೆ. ಎಲ್ಲಿಯೇ ಹೋದರು ತನ್ನ ಮಾಲೀಕನನ್ನು ಮರೆಯದೆ ಬಂದಿರುವುದು ಆಶ್ಚರ್ಯವನ್ನು ಕೂಡ ಉಂಟು ಮಾಡಿದೆ.






