ಶಿವಮೊಗ್ಗ: ಕಳೆದ 6 ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದ ಛಾಯಾಗ್ರಹಕ ನಂದನ್ ಇಂದು ಕೊನೆಯುಸಿರೆಳೆದಿದ್ದಾರೆ. ನಂದನ್ ಗೆ ಈಗ 57 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ಹಿರಿಯ ವರದಿಗಾರರಾಗಿದ್ದರು. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಚಂದನ್ ಹಾಗೂ ಕೀರ್ತನ ಎಂಬ ಇಬ್ಬರು ಮಕ್ಕಳಿದ್ದಾರೆ.
ನಂದನ್ 1999ರಿಂದ ಶಿವಮೊಗ್ಗದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ನಂದನ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಅದಷ್ಟೇ ಅಲ್ಲ ಸಾಕಷ್ಟು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದರು. ನಂದನ್ ಅವರು ತೆಗೆದ ಹಲವು ಚಿತ್ರಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದವು. ಕುವೆಂಪು ವಿಶ್ವವಿದ್ಯಾಲಯ, ಧರ್ಮಸ್ಥಳ ಎಸ್ ಡಿ ಎಂ ಕಾಲೇಜು ಹಾಗೂ ಮೈಸೂರಿನ ಹಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ತರಬೇತಿ ನೀಡುತ್ತಿದ್ದರು. ಪರಿಸರ ಹಾಗೂ ವ್ಯಕ್ತಿ ಚಿತ್ರಗಳನ್ನು ಹೆಚ್ಚು ಸೆರೆ ಹಿಡಿಯುತ್ತಿದ್ದರು.
ಹೀಗೆ ಸೆರೆ ಹಿಡಿದ ಪರಿಸರ ಹಾಗೂ ವ್ಯಕ್ತಿ ಚಿತ್ರಗಳಿಗೆ ಹಲವು ಪ್ರಶಸ್ತಿಗಳು ಸಂದಿವೆ. ನಿನ್ನೆಯಷ್ಟೇ ಶಿವಮೊಗ್ಗ ಸಮೀಪದ ಕುಂಸಿಯ ಸರ್ಕಾರಿ ಶಾಲೆಯಲ್ಲಿ ಛಾಯಾಚಿತ್ರ ತರಬೇತಿಯನ್ನು ಏರ್ಪಡಿಸಿ, ಛಾಯಾಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದರು. ಶಿವಮೊಗ್ಗದ ರೈಲ್ವೆ ನಿಲ್ದಾಣ ಬಳಿ ಇರುವ ನಂದನ್ ಅವರ ಮನೆಗೆ ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ. ಶಿವಮೊಗ್ಗದ ರೋಟರಿ ಚಿತಾಗರದಲ್ಲಿ ಇಂದು ಸಂಜೆ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ನಿಧನಕ್ಕೆ ಜಿಲ್ಲಾ ವರದಿಗಾರರು, ಛಾಯಾಗ್ರಾಹಕರು ಕಂಬನಿ ಮಿಡಿದಿದ್ದಾರೆ. ಎಲ್ಲರೊಟ್ಟಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದವರು ನಂದನ್.