ಶಿವಮೊಗ್ಗ: ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಬಿವೈ ರಾಘವೇಂದ್ರ ನಿಂತಿದ್ದಾರೆ. ಮಾಜಿ ಶಾಸಕ ಹರತಾಳು ಹಾಲಪ್ಪ ಇದೀಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಾ. ರಾಜ್ ಕುಮಾರ್ ಅವರಿಗೆ ನಾವೆಲ್ಲಾ ಗೌರವ ಕೊಡುತ್ತೇವೆ. ಇಲ್ಲಿ ಇರುವವರೆಲ್ಲಾ ಗೌರವ ಕೊಡುತ್ತೇವೆ. ಬಂಗಾರಪ್ಪ ಅವರನ್ನು ಸಹ ಪುಣ್ಯಾತ್ಮ ಎಂದು ಸ್ಮರಿಸುತ್ತೇವೆ. 80 ರ ದಶಕದಲ್ಲಿ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರಬೇಕು ಎಂದು ಹೋರಾಟಗಳು ನಡೆಯುತ್ತಿದ್ದವು. ಎಕೆ ಸುಬ್ಬಯ್ಯ ಸೇರಿ ಎಲ್ಲರು ಕರೆದಿದ್ದರು. ಆದರೆ ರಾಜ್ ಕುಮಾರ್, ನಾನು ಮತ್ತು ನನ್ನ ಕುಟುಂಬ ಎಂದೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಇವರು ರಾಜಕೀಯಕ್ಕೆ ಬಂದು ಆ ಕುಟುಂಬದ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ನಾಯಕ ಹರತಾಳು ಹಾಲಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ಕೂಡ ಚುನಾವಣೆಗೆ ನಿಂತಿದ್ದರು. ಆ ಬಳಿಕ ಅವರನ್ನು ಕ್ಷೇತ್ರದಲ್ಲಿ ನೋಡಿಯೇ ಇಲ್ಲ. ನಾನಂತೂ ನೋಡಿಲ್ಲ. ನೀವೂ ನೋಡಿದ್ದೀರಾ..? ಅವರನ್ನು ಗೆಲ್ಲಿಸಿದರೆ ಸಮಸ್ಯೆಗಳಯ ಬಗೆಹರಿಸುವುದಿಲ್ಲ. ಹೀಗಾಗಿ ರಾಘವೇಂದ್ರ ಅವರನ್ನು ಗೆಲ್ಲಿಸಿ, ಕೆಲಸ ಮಾಡಿಸಿಕೊಳ್ಳೋಣಾ. ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸೋಣ. ರಾಘಣ್ಣ ನಮ್ಮ ಹತ್ತಿರದ ಅಭ್ಯರ್ಥಿ. ಅವರು ಕೆಲಸ ಮಾಡಿಲ್ಲ ಅಂದ್ರೆ ಅವರ ಮನೆ ಹತ್ತಿರ ಹೋಗಿ ಗಲಾಟೆ ಮಾಡಿ, ಕೂತು ಮಾತನಾಡಲು ಅವಕಾಶವಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಭೇಟಿಯಾಗಲು ಸಾಧ್ಯವೆ ಎಂದು ಬಿವೈ ರಾಘವೇಂದ್ರ ಅವರ ಪ್ರಚಾರದ ವೇಳೆ ಗೀತಾ ಶಿವರಾಜ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.