ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 05 : ಕುದುರೆಮುಖ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಸುಂದರವಾದ ಗಿರಿಧಾಮ, ಚಾರಣ ತಾಣ ಮತ್ತು ರಾಷ್ಟ್ರೀಯ ಉದ್ಯಾನವನವಾಗಿದೆ. ಈ ಬೆಟ್ಟದ ಶ್ರೇಣಿಯು ಮುಖ್ಯ ಶಿಖರವು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು, ಒಂದು ನಿರ್ಧಿಷ್ಟ ಕೋನದಿಂದ ನೋಡಿದಾಗ ಕುದುರೆಯ ಮುಖವಾದ ಆಕಾರದಲ್ಲಿ ಕಾಣಿಸುತ್ತದೆ. ಇತಿಹಾಸದಲ್ಲಿ ಇದನ್ನು ಸಂಸೀಪರ್ವತ ಎಂದು ಕರೆಯಲಾಗುತ್ತದೆ. ಏಕೆಂದರೆ ಹಿಂದೆ ಸಂಸೀ ಹಳ್ಳಿಯ ಮೂಲಕ ಇಲ್ಲಿಗೆ ಪ್ರವೇಶವಿತ್ತು. ಇದು ಸಮುದ್ರ ಮಟ್ಟದಿಂದ ಸುಮಾರು 6207 ಅಡಿ ಎತ್ತರದಲ್ಲಿದೆ. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‍ಗಿರಿಯ ನಂತರ ಇದು ಕರ್ನಾಟಕದ 3ನೇ ಅತಿ ಎತ್ತರ ಶಿಖರವಾಗಿದೆ. ಇದು ದಟ್ಟವಾದ ಕಾಡುಗಳಿಂದ ಕೂಡಿದೆ. ಜಲಪಾತಗಳು ಮತ್ತು ಜೀವವೈವಿದ್ಯಕ್ಕೆ ಜನಪ್ರಿಯವಾಗಿದೆ. ತುಂಗ, ಭದ್ರ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಾನವಾಗಿದೆ. ಇದು ವಿಶ್ವದ 34 ಜೀವವೈವಿದ್ಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಮಲಬಾರ್ ಸೀವೆಬ್ ಕಾಡುನಾಯಿಗಳು, ಕರಡಿಗಳು, ಚಿರತೆಗಳನ್ನು ಕಾಣಬಹುದು. ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಇಲ್ಲಿನ ಗಂಗಾ ಮೂಲದಲ್ಲಿ ಉಗಮಿಸುತ್ತವೆ. ಅಕ್ಟೋಬರ್‍ನಿಂದ ಮೇ ತಿಂಗಳವರೆಗೆ ಹಸಿರು ಕಂಗೊಳಿಸುತ್ತದೆ.

ಕುದುರೆಮುಖ ಪ್ರದೇಶದಲ್ಲಿ ಸುಮಾರು (ಅರೋಲಿ-ಗಂಗಾಮೂಲ ಶ್ರೇಣಿ) ಸುಮಾರು ಒಂದು ಸಾವಿರ ಮಿಲಿಯನ್ ಟನ್‍ಗಳಷ್ಟು ಹೆಚ್ಚು ಕಡಿಮೆ ದರ್ಜೆಯ ಮ್ಯಾಗ್ನೇಟೈಟ್ ಅದಿರಿನ ಲಭ್ಯತೆ ಇದೆ ಎಂದು ಸಮೀಕ್ಷೆಯಿಂದ ಅಂದಾಜು ಮಾಡಲಾಗಿತ್ತು. ಈ ಗಣಿಗಾರಿಕೆಯಲ್ಲಿ ಸುಮಾರು 500 ಮಿಲಿಯನ್ ಟನ್‍ಗಳಷ್ಟು ಅದಿರನ್ನು ಗಣಿಗಾರಿಕೆಯನ್ನು ಮಾಡಲಾಗಿದ್ದು ಎಂದು ಅಂದಾಜು ಮಾಡಲಾಗಿದೆ. ಕುದುರೆಮುಖದಲ್ಲಿ 4605 ಹೆಕ್ಟೇರ್ ಪ್ರದೇಶದಲ್ಲಿ ನಡೆದಿದ್ದ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್‍ನ ಆದೇಶದ ಮೇರೆಗೆ 2005 ರಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಯಿತು ಮತ್ತು ಈ ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್ಸು ನೀಡಲಾಯಿತು ಎಂದು ದಾಖಲೆಗಳಿಂದ ದೃಢಪಟ್ಟಿದೆ.
ಈ ಪ್ರದೇಶದಲ್ಲಿ ಹೆಚ್ಚಿನ ಮ್ಯಾಗ್ನೇಟೈಟ್ ಕಬ್ಬಿಣದ ಅದಿರು ಸರಾಸರಿ 30 ರಿಂದ 40% ರಷ್ಟು ಕಬ್ಬಿಣದ ಅದಿರನ್ನು ಹೊಂದಿದೆ. ಕುದುರೆಮುಖವು ವಿಶ್ವದ ಅತಿದೊಡ್ಡ ಕಬ್ಬಿಣದ ಅದಿರಿನ ನಿಕ್ಷೇಪಗಳಲ್ಲಿ ಒಂದಾಗಿದೆ. ಅಂದಾಜು ಸಾವಿರ ಮಿಲಿಯನ್ ಟನ್‍ಗಳಿಗೂ ಹೆಚ್ಚು ಮ್ಯಾಗ್ನೇಟೈಟ್ ಅದಿರು ಇಲ್ಲಿ ಲಭ್ಯವಿದೆ ಎಂದು ಸಮೀಕ್ಷೆಗಳಿಂದ ದೃಢಪಟ್ಟಿದೆ. ಕಳಸ ತಾಲ್ಲೂಕಿನ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಈ ನಿಕ್ಷೇಪಗಳಿವೆ.
ಕುದುರೆಮುಖ ಅದಿರು (ಏIಔಅಐ) ಭಾರತದ ಪ್ರಮುಖ ಗಣಿಗಾರಿಕೆ ಯೋಜನೆಗಳಲ್ಲಿ ಒಂದಾಗಿತ್ತು. ಈ ಗಣಿಗಾರಿಕೆ 2ನೇ ಏಪ್ರಿಲ್ 1976 ರಂದು ಸ್ಥಾಪಿಸಲಾಯಿತು. ಪರಿಸರ ಸೂಕ್ಷ್ಮವಲಯ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿರುವುದರಿಂದ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗುವ ಕಾರಣ ಮತ್ತು ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ರಸ್ತೆಗಳ ಬಳಕೆ ಅಭಿವೃದ್ಧಿ ಕಾರ್ಯವನ್ನು ನಿಷೇದಿಸಲಾಗಿದೆ. ಈ ಗಣಿಗಾರಿಕೆಯನ್ನು 31ನೇ ಡಿಸೆಂಬರ್ 2005 ರಲ್ಲಿ ಸ್ಥಿಗಿತಗೊಳಿಸಲಾಯಿತು.
ಈ ಗಣಿಗಾರಿಕೆಯನ್ನು ಮುಚ್ಚಲು ಕಾರಣವೇನೆಂದರೆ ಪರಿಸರ ನಾಶ, ಜಲಮಾಲಿನ್ಯ ವನ್ಯಜೀವಿಗಳಿಗೆ ಅಪಾಯ ಇತರೆ ಪ್ರಮುಖ ಕಾರಣಗಳಿಂದ ಮುಚ್ಚಲಾಗಿದೆ, ಕುದುರೆಮುಖ ಗಣಿಗಾರಿಕೆಯು 1976 ರಿಂದ 2005 ರವರೆಗೆ ನಡೆಯಿತು. ಪರಿಸರ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಇದನ್ನು ಸಂಪೂರ್ಣ ನಿಲ್ಲಿಸಲಾಯಿತು.

















