ಗೃಹಲಕ್ಷ್ಮೀ ಸೇರಿದಂತೆ ಇತರೆ ಯೋಜನೆಗಳ ಹಣವನ್ನು ಸಾಲದ ಕಂತಿಗೆ ಜಮೆ ಮಾಡಿಕೊಳ್ಳುವಂತಿಲ್ಲ : ರೈತ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ. ಸೂಚನೆ

3 Min Read

 

ಚಿತ್ರದುರ್ಗ,(ಸೆ.26) : ಚಿತ್ರದುರ್ಗ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಳೆ ಕೊರತೆ ಉಂಟಾಗಿದೆ. ಬರ ಆವರಿಸಿದ್ದು ಮಳೆ ಆಶ್ರಿತ ಬೆಳೆಗಳು ಶೇ.80 ರಿಂದ 100 ರಷ್ಟು ಹಾನಿಗೆ ಒಳಗಾಗಿವೆ. ಶೇ.25 ರಷ್ಟು ತುರ್ತು ಮಧ್ಯಂತರ ಪರಿಹಾರವನ್ನು ಬೆಳೆ ವಿಮೆ ಕಂಪನಿಗಳಿಂದ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.

ಈ ಕುರಿತು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಹವಮಾನ ತಜ್ಞರು, ವಿಮಾ ಕಂಪನಿ ಪ್ರತಿನಿಧಿಗಳು ಹಾಗೂ ಜಿಲ್ಲೆಯ ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಂಪೂರ್ಣವಾಗಿ ಮಳೆ ಕೊರತೆ ಉಂಟಾಗಿದೆ.  ರಾಜ್ಯ ಸರ್ಕಾರ ಬರ ಘೋಷಣೆಗೆ ತೀರ್ಮಾನ ಮಾಡಿದೆ. ಕೃಷಿ ಸಚಿವರು ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾದ ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಬೆಳೆಗಾಳದ ಶೇಂಗಾ, ಮುಸುಕಿನ ಜೋಳ, ಜೋಳ, ರಾಗಿ, ಸಿರಿಧಾನ್ಯಗಳು, ತೊಗರಿ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿವೆ. ಜಿಲ್ಲೆಯ ರೈತರ ಹಿತ ಕಾಯುವ ನಿಟ್ಟಿನಲ್ಲಿ ತಕ್ಷಣವೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಶೇ.25 ರಷ್ಟು ಮಧ್ಯಂತರ ಬೆಳೆ ಪರಿಹಾರವನ್ನು ವಿಮಾ ಕಂಪನಿಗಳು ನೀಡುವಂತೆ ಶಿಫಾರಸ್ಸು ಮಾಡಲಾಗುವುದು. ರೈತರು ಈ ಕುರಿತು ಗೊಂದಲಗಳಿಗೆ ಒಳಗಾವುದು ಬೇಡ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯ 2,98,150 ಹೆಕ್ಟೇರ್ ಕೃಷಿ ಭೂಮಿ ಪೈಕಿ 2,81,395 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಶೇ.94.38 ಬಿತ್ತನೆ ಪ್ರಮಾಣ ದಾಖಲಾಗಿದೆ. ಏಕದಳ ಧಾನ್ಯಗಳ ಪೈಕಿ 89,854 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ರಾಗಿ 35,883 ಹೆಕ್ಟೇರ್, ಸಜ್ಜೆ-19037 ಹೆಕ್ಟೇರ್ ಸೇರಿದಂತೆ ಇತರೆ ಸಿರಿಧಾನ್ಯಗಳು, ಅಲ್ಪ ಪ್ರಮಾಣದಲ್ಲಿ ಜೋಳ ಹಾಗೂ ಭತ್ತ ಬಿತ್ತನೆ ಮಾಡಲಾಗಿದೆ. ದ್ವಿದಳ ಬೆಳಗಳ ಪೈಕಿ 12,792 ಹೆಕ್ಟೆರ್ ತೊಗರಿ, 3407 ಹೆಕ್ಟೆರ್ ಹೆಸರು, 834 ಹೆಕ್ಟೇರ್ ಅವರೆ, 344 ಹೆಕ್ಟೇರ್ ಹುರುಳಿ, 317 ಹೆಕ್ಟೇರ್ ಅಲಸಂದಿ ಸೇರಿದಂತೆ ಅಲ್ಪ ಪ್ರಮಾಣದಲ್ಲಿ ಉದ್ದು, ಸೋಯಾಬಿನ್ ಬಿತ್ತನೆಯಾಗಿದೆ.

ಎಣ್ಣೆ ಕಾಳುಗಳ ಪೈಕಿ 1,08,852 ಹೆಕ್ಟೇರ್ ಶೇಂಗಾ, 583 ಹೆಕ್ಟೇರ್ ಸೂರ್ಯಕಾಂತಿ, 274 ಹೆಕ್ಟೇರ್ ಹರಳು ಸೇರಿದಂತೆ ಅಲ್ಪಪ್ರಮಾಣದಲ್ಲಿ ಎಳ್ಳು ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಯಾದ ಹತ್ತಿಯನ್ನು 8,715 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ 83,606 ರೈತರು ನೊಂದಣಿ ಮಾಡಿಕೊಡಿದ್ದಾರೆ. ಒಟ್ಟು 11.92 ಕೋಟಿ ರೂಪಾಯಿ ಪ್ರೀಮಿಯಂ ಮೊತ್ತ ಪಾವತಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಓಂಕಾರಪ್ಪ ಮಾತನಾಡಿ, ಕೃಷಿ ಇಲಾಖೆಯ ಕೋರಿಕೆಯಂತೆ ಮಳೆ ಕೊರತೆಯಿಂದ ಉಂಟಾದ ಹಾನಿ ಬಗ್ಗೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಕೃಷಿ ವಿಜ್ಞಾನಿಗಳ ತಂಡ ಪರಿಶೀಲನೆ ನೆಡೆಸಿದೆ. ಚಳ್ಳಕೆರೆ ಭಾಗದಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ವಿಫಲವಾಗಿದೆ. ಶೇಂಗಾ ಕಾಳುಗಟ್ಟಲು ಸಾಧ್ಯವೇ ಇಲ್ಲ. ಜಿಲ್ಲೆಯಲ್ಲಿ ಹೆಚ್ಚು ಬಿತ್ತನೆಯಾಗಿರುವ ಮಕ್ಕೆಜೋಳ 3 ಅಡಿ ಎತ್ತರ ಬೆಳೆದಿದ್ದರು, ಮಳೆ ಕೊರತೆಯಿಂದ ಕಾಳುಗಟ್ಟಿಲ್ಲ. ರೈತರು ರಾಗಿಯನ್ನು ಎರೆಡು ಬಾರಿ ಬಿತ್ತನೆ ಮಾಡಿದರು ಬೆಳೆ ಕೈಗೆ ಬರುವ ಯಾವ ಲಕ್ಷಣಗಳು ಇಲ್ಲ. ಮಳೆ ಕೊರತೆಯಿಂದ ಈರುಳ್ಳಿ ಸಹ ಬಾಧಿತವಾಗಿದೆ. ಜಿಲ್ಲೆಯಲ್ಲಿ ಶೇ.100 ರಷ್ಟು ಬೆಳೆ ಹಾನಿಯಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಚಿತ್ರದುರ್ಗ ತಾಲ್ಲೂಕು ತುರವನೂರು ಹೋಬಳಿ ಹುಣಸೆಕಟ್ಟೆ ಗ್ರಾಮದಲ್ಲಿ ಸೇವಂತಿ ಬೆಳೆ ನುಸಿರೋಗ ಬಾಧೆಯಿಂದ ಹಾನಿಗೆ ಒಳಗಾಗಿದೆ. ಹೊಸದುರ್ಗ ಹಾಗೂ ಹೊಳಲ್ಕೆರೆ ಭಾಗದಲ್ಲಿ ತೆಂಗಿನ ತೋಟದಲ್ಲಿ ಕಪ್ಪು ತಲೆ ಉಳುವಿನ ಬಾದೆ ಹೆಚ್ಚಾಗಿ ಕಂಡುಬರುತ್ತಿದೆ.  ಈ ಎರಡು ಪ್ರಕರಣಗಳು ಕೀಟ ಬಾಧೆ ಆಗಿವೆ. ಇವನ್ನು ಪ್ರಕೃತಿ ವಿಕೋಪದಡಿ ಪರಿಗಣಿಸಲು ಸಾಧ್ಯವಿಲ್ಲ. ಸರ್ಕಾರ ಇದಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಇದರಲ್ಲಿ ಬೆಳೆಗೆ ಅಗತ್ಯ ಇರುವ ಔಷಧ ಹಾಗೂ ಪರಿಕರಗಳನ್ನು ರೈತರಿಗೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರೈತರ ಖಾತೆಗೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಜಮೆಯಾಗುವ ಮೊತ್ತವನ್ನು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಹಾಗೆಯೇ ರಾಜ್ಯ ಸರ್ಕಾರ ಜಾರಿ ತಂದಿರುವ ಗೃಹಲಕ್ಷ್ಮೀ ಸೇರಿದಂತೆ ಇತರೆ ಯೋಜನೆಗಳ ಹಣವನ್ನು ಸಹ ಸಾಲದ ಕಂತಿಗೆ ಜಮೆ ಮಾಡಿಕೊಳ್ಳದಂತೆ ಎಲ್ಲ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ಅವರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ಶಿವಕುಮಾರ್, ಸಹಾಯಕ ನಿರ್ದೇಶಕ ಚಂದ್ರಕುಮಾರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮಾನಾಯ್ಕ್,  ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಧನಂಜಯ, ಚಿಕ್ಕಪ್ಪಹಳ್ಳಿ ರುದ್ರಸ್ವಾಮಿ, ಈಚಗಟ್ಟ ಸಿದ್ದವೀರಪ್ಪ ಇತರೆ ರೈತ ಮುಖಂಡರುಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳು ಇದ್ದರು.

 

Share This Article
Leave a Comment

Leave a Reply

Your email address will not be published. Required fields are marked *