ಸುದ್ದಿಒನ್, ಹೊಸದುರ್ಗ, ಡಿಸೆಂಬರ್.26 : ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಶ್ರೀ ಹರಿಹರೇಶ್ವರ ದೇವಾಲಯದ ಬಾಗಿಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಹೊರವಲಯದಲ್ಲಿರುವ ದೇವಾಲಯದ ಹುಂಡಿ ಕಳ್ಳತನಕ್ಕೆ ಯತ್ನಿಸಿ, ನಂತರ ದೇವಾಲಯದ ಬಾಗಿಲಿಗೆ ಬೆಂಕಿ ಹಚ್ಚಿದ ಅಟ್ಟಹಾಸ ಮೆರೆದಿದ್ದಾರೆ. ದೇವರ ಗುಡಿಯ ಮುಂಬಾಗಿಲಿನಲ್ಲಿ ಕಸ ಕಡ್ಡಿ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ದೇವಾಲಯ ಬಾಗಿಲು ಸುಟ್ಟು ಕರಕಲಾಗಿದೆ. ಇನ್ನು ಹೊರ ಭಾಗದ ಮೇಲ್ಭಾಗದಲ್ಲಿ ಬೆಂಕಿಯ ಹೊಗೆಗೆ ಕಪ್ಪಾಗಿದೆ.
ವಿಷಯ ತಿಳಿದ ತಕ್ಷಣ ಹೊಸದುರ್ಗ ಶಾಸಕ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಪತ್ನಿಯ ಊರು ಕಾರೇಹಳ್ಳಿಯಾಗಿದ್ದು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯಕ್ಕೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಗುಡಿಯಲ್ಲಿರುವ ದೇವರನ್ನು ಬಿಡದ ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಬಂಧಿಸಿ, ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಶ್ರೀಗಳು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.