ವರದಿ : ದ್ಯಾಮೇಶ್
ಚಿತ್ರದುರ್ಗ, (ಮಾ.27) : ಮನುಕುಲ ತಲ್ಲಣದ ವಾತಾವರಣದಲ್ಲಿ ಬದುಕುತ್ತಿದೆ. ನಮ್ಮ ಮಾಧ್ಯಮಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಏನನ್ನು ಹೇಳಬೇಕೋ ಅದನ್ನು ಹೇಳೋದಿಲ್ಲ. ಏನನ್ನು ಹೇಳಬಾರದೋ ಅದನ್ನು ವೈಭವೀಕರಿಸಿ ತೋರಿಸಿ ಜನರ ಮನಸ್ಸನ್ನು ವಿಕಾರಗೊಳಿಸುತ್ತಿವೆ. ವಿಕಾರಗೊಳಿಸುವ ಬದಲಾಗಿ ವಿಕಾಸಗೊಳಿಸುವ ಕೆಲಸವನ್ನು ರಂಗಭೂಮಿ ಮಾಧ್ಯಮ ಮಾಡುತ್ತದೆ ಎಂದು
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಎಸ್ ಎಸ್ ರಂಗಮಂದಿರದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೊರೋನಾ ಅವಧಿಯಲ್ಲಿ ರಂಗಭೂಮಿ ಸೊರಗಿದ್ದನ್ನು ನೀವೆಲ್ಲರೂ ಗಮನಿಸಿದ್ದೀರಿ. ಕೊರೋನಕ್ಕಿಂತಲೂ ತುಂಬಾ ಅಪಾಯಕಾರಿಯಾದುದು ಜಾತಿ, ಧರ್ಮ, ಪಂಗಡಗಳ ಹೆಸರಿನಲ್ಲಿ ಮನುಕುಲವನ್ನು ಒಡೆದು ಆಳುತ್ತಿರುವುದು. ಈ ಬಗ್ಗೆ ಜನರಲ್ಲಿ ಜಾಗೃತಿಗೊಳಿಸುವ ಮಾಧ್ಯಮ ರಂಗಭೂಮಿ.
ರಂಗಭೂಮಿಯಲ್ಲಿ ಸಿನಿಮಾದಂತೆ ರೀಟೇಕ್ ಇರೋದಿಲ್ಲ. ಜನರಲ್ಲಿ ವಿಚಾರ ಕ್ರಾಂತಿಯನ್ನು ಬಿತ್ತುವ ಮಾಧ್ಯಮ ರಂಗಭೂಮಿ. ಸತ್ಯದ ನೆಲೆ ಇವತ್ತು ಬತ್ತಿ ಹೋಗುತ್ತಿದೆ. ಹೊತ್ತು ಬಂದ ಹಾಗೆ ಕೊಡೆ ಹಿಡಿಯುವ ಪ್ರವೃತ್ತಿ ಸಾಮಾನ್ಯರಿಂದ ಅಸಾಮಾನ್ಯರವರೆಗೂ ನಡೆಯುತ್ತಿದೆ. ಅಂತರಂಗದ ಕದ ಮುಚ್ಚಿ ಬಹಿರಂಗದ ಕದ ತೆರೆದುಕೊಂಡಿದ್ದೇವೆ. ಬದಲಾಗಿ ಅಂತರಂಗದ ಕದ ತೆರೆದಾಗ ಮಾತ್ರ ವ್ಯಕ್ತಿ ವಿಕಾಸ ಹೊಂದಲಿಕ್ಕೆ ಸಾಧ್ಯ. ನಮ್ಮ ಮನಸ್ಸು ಕೊಳಕಾದರೆ, ಐತಿಹ್ಯ ಪ್ರಜ್ಞೆ ಇಲ್ಲದಿದ್ದರೆ, ಮೌಢ್ಯ ತುಂಬಿದ್ದರೆ, ದೂರದೃಷ್ಟಿ ಇಲ್ಲದೇ ಇದ್ದರೆ ಸುಂದರ ಸಮಾಜ ಕಟ್ಟಲಿಕ್ಕೆ ಸಾಧ್ಯವಿಲ್ಲ. ಸಂಘಟನೆಯಲ್ಲಿ ಶಕ್ತಿಯಿದೆಯೇ ಹೊರತು ವಿಘಟನೆಯಲ್ಲಿ ಅಲ್ಲ. ರಂಗಭೂಮಿ ಅಂತಹ ಸಂಘಟನೆ ಕಲಿಸಿಕೊಡುತ್ತದೆ.
ಜಾಗತಿಕ ಮಟ್ಟದಲ್ಲಿ ಎಲ್ಲ ಕಲಾವಿದರನ್ನು ಸಂಘಟಿಸುವ ನಿಟ್ಟಿನಲ್ಲಿ 1962ರಿಂದ ‘ವಿಶ್ವರಂಗ ಭೂಮಿ’ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಈ ವರ್ಷದ ವಿಶ್ವರಂಗಭೂಮಿಯ ಸಂದೇಶವನ್ನು ರಂಗಶಿಕ್ಷಕರಾದ ವೆಂಕಟೇಶ್ವರ ಸ್ವರ ವಾಚಿಸಿದರು.
ರಂಗಶಾಲೆ ಪ್ರಾಚಾರ್ಯ ಜಗದೀಶ್ ಮಾತನಾಡಿದರು.
ರಂಗಶಾಲೆಯ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡಿದರು. ಹೊಸಪೇಟೆಯ ಟಿ ಬಿ ಡ್ಯಾಂನ ಕನ್ನಡ ಕಲಾಸಂಘದ ಕಲಾವಿದರಿಂದ :ನಾ ಸತ್ತಿಲ್ಲ’ ನಾಟಕ ಪ್ರದರ್ಶನವಾಯಿತು.