ದೇವರ ದಾಸಿಮಯ್ಯರ ಬದುಕು ಆದರ್ಶ ಪ್ರಾಯ : ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮಾ.26) : ನೇಕಾರಿಕೆ ಕಾಯಕ ಮಾಡಿಕೊಂಡು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ದೇವರ ದಾಸಿಮಯ್ಯನವರ ಬದುಕು ಆದರ್ಶಪ್ರಾಯ ಎಂದು ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ ಶ್ರೀ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಆದರ್ಶ ಪ್ರಾಯರು. ನೇಯ್ಗೆ ಕೆಲಸ ನಿರ್ವಹಿಸುತ್ತಾ ಆರ್ಥಿಕ ಜೀವನ ಕಟ್ಟಿಕೊಂಡು ಸಾಮಾಜಿಕವಾಗಿ, ಧಾರ್ಮಿಕವಾಗಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯ ಮಾಡಿದರೂ ಸಹ ನಮ್ಮ ಕಾಯಕ ವೃತ್ತಿ  ಮರೆಯಬಾರದು. ಕಾಯಕ ವೃತ್ತಿಯ ಜೊತೆಯಲ್ಲಿ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದು ತಿಳಿಸಿಕೊಟ್ಟ ಆದರ್ಶಪ್ರಾಯ ವ್ಯಕ್ತಿ ದೇವರ ದಾಸಿಮಯ್ಯ. ಎಂದು ಹೇಳಿದರು.

ವಚನಕಾರರು ಸರಳ ಮತ್ತು ಸುಲಲಿತವಾದ ವಚನ ಸಾಹಿತ್ಯದ ಮೂಲಕ ಜನರನ್ನು ತಿದ್ದುವ ಕೆಲಸ ಮಾಡಿದರು. ಜೊತೆಗೆ ವಚನಗಳಲ್ಲಿ ಸಾಮಾಜಿಕ, ಧಾರ್ಮಿಕ ಅಂಶಗಳೊಂದಿಗೆ ಜನರಿಗೆ ಸಂದೇಶ ನೀಡಿದರು ಎಂದರು.

ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ ಮಾತನಾಡಿ, ಸಂತರು, ಮಹನೀಯರು ಕೇವಲ ಒಂದು ಜಾತಿಗೆ ಸೀಮಿತರಲ್ಲ. ಮಹನೀಯರು ಆಚಾರ-ವಿಚಾರ, ತತ್ವ-ಸಿದ್ದಾಂತಗಳು ಸಮಾಜಕ್ಕೆ ಮಾರ್ಗದರ್ಶನ ಹಾಗೂ ಮನುಕುಲಕ್ಕೆ ಉಪಯೋಗವಾಗುವಂತಹ ಸಂದೇಶ ನೀಡಿದ್ದಾರೆ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಉಪನ್ಯಾಸ ನೀಡಿ, ಸಂತರ, ಮಹನೀಯರ ಆದರ್ಶ-ಉಪದೇಶಗಳು ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿದೆ. ಹಾಗಾಗಿ ಮಹನೀಯರ ತತ್ವ-ಆದರ್ಶಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಚಿತ್ರದುರ್ಗ ನಗರದ ಮುಖ್ಯರಸ್ತೆ ಹಾಗೂ ವೃತ್ತಕ್ಕೆ ಶ್ರೀ ದೇವರ ದಾಸಿಮಯ್ಯ ಹೆಸರಿಡಬೇಕು ಹಾಗೂ ನಗರದಲ್ಲಿ ಜನಾಂಗದವರಿಗೆ ಸ್ಮಶಾನ ಇರುವುದಿಲ್ಲ. ಹಾಗಾಗಿ ಪ್ರತ್ಯೇಕ ಜಾಗ ಗುರುತಿಸಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್, ಮುಖಂಡರಾದ ಯೋಗೇಶ್, ಚಂದ್ರಶೇಖರ್, ಶಶಿಧರ್, ಶಕಾಂಬರಿ ಮಹಿಳಾ ಸಂಘದ ಉಂಬಕ್ಕ, ರಿದ್ಧಿ ಪೌಂಡೇಷನ್ ಟ್ರಸ್ಟ್ ನ ರೇವತಿ ಸೇರಿದಂತೆ ಮತ್ತಿತರರು ಇದ್ದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಶಬೀನಾಭಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *