ಇತ್ತಿಚೆಗಷ್ಟೇ ಪಾದಯಾತ್ರೆ ಮೂಲಕ ಕುಟುಂಬವೊಂದು ತಿರುಪತಿ ಬೆಟ್ಟ ಏರುತ್ತಿತ್ತು. ಆದರೆ ಈ ವೇಳೆ ಚಿರತೆಯೊಂದು ಆರು ವರ್ಷದ ಬಾಲಕಿಯನ್ನು ಹೊತ್ತೊಯ್ದು, ಪ್ರಾಣ ತೆಗೆದಿರುವ ಘಟನೆ ನಡೆದಿತ್ತು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಬಳಿಕ ಹುಡುಕಾಟ ನಡೆಸಿದಾಗ ಬಾಲಕಿಯ ಮೃತದೇಹವೂ ಪತ್ತೆಯಾಗಿತ್ತು. ಇದೀಗ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಘಟನೆ ನಡೆದ ಬಳಿಕ ಚಿರತೆಯನ್ನು ಹಿಡಿಯಲು ಪೊಲೀಸರು ಪ್ಲ್ಯಾನ್ ಮಾಡಿದ್ದರು. ಅದಕ್ಕೆಂದೆ ಬೋನುಗಳನ್ನು ಹಾಕಿದ್ದರು. ಸುತ್ತ ಮುತ್ತ ಹನ್ನೆರಡು ಸಿಸಿಟಿವಿಗಳನ್ನು ಅಳವಡಿಸಿ, ಕಾವಲಿಗಿದ್ದರು. ಚಿರತೆಯ ಚಲನವಲನವನ್ನು ಗಮನಿಸುತ್ತಿದ್ದರು. ಶನಿವಾರ ರಾತ್ರಿ ಕಡೆಗೂ ಚಿರತೆ ಬೋನಿಗೆ ಬಿದ್ದಿದೆ.
ಘಟನೆ ಬಳಿಕ ಟಿಟಿಡಿ ತನ್ನ ಭಕ್ತರಿಗೆ ಒಂದಷ್ಟು ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರ ತನಕ ಮಾತ್ರ ಮಕ್ಕಳೊಂದಿಗೆ ಬೆಟ್ಟ ಹತ್ತುವುದು. ಚಾರಣ ಮಾಡುವಾಗ ಎಚ್ಚರಿಕೆಯಿಂದ ಇರಲು ಸೂಚಿಸಿದೆ.
ಹಾಗೇ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರ್ಬಂಧಿಸಲಾಗಿದೆ. ಪಾದಚಾರಿ ಮಾರ್ಗಗಳು ಮತ್ತು ಘಾಟ್ ರಸ್ತೆಗಳಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ಬಿ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.