ಬೆಂಗಳೂರು: ಜಮ್ಮುವಿನ ರಜೌರಿಯಲ್ಲಿ ಭಯೋತ್ಪಾದಕರಲ್ಲಿ ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಯೋಧ ಪ್ರಾಂಜಲ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸುತ್ತಿವೆ.
ಜಿಗಣಿಯ ನಂದನವನ ಬಡಾವಣೆಯಲ್ಲಿರುವ ನಿವಾಸಕ್ಕೆ ಪಾರ್ಥಿವ ಶರೀರ ಇಂದು ಆಗಮಿಸಲಿದೆ. ಮನೆಗೆ ಹತ್ತಿರದಲ್ಲಿರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕಳೆದ ಆರು ತಿಂಗಳ ಹಿಂದೆ ಮನೆಗೆ ಆಗಮಿಸಿದ್ದ ಪ್ರಾಂಜಲ್, ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಒಂದು ವಾರ ಪೋಷಕರ ಜೊತೆ ಇದ್ದು ಕರ್ತವ್ಯಕ್ಕೆ ತೆರಳಿದ್ದ ಪ್ರಾಂಜಲ್ ಇದೀಗ ಮನೆಗೆ ವಾಪಸ್ ಆಗಿದ್ದು ಹುತಾತ್ಮರಾಗಿ.
ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ MRPL ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್ ಅನ್ನು ಲೀಡ್ ಮಾಡುತ್ತಿದ್ದರು. ಇತ್ತೀಚೆಗೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದರು. ಕ್ಯಾಪ್ಟನ್ ಪ್ರಾಂಜಲ್ ಕಳೆದ ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಪತ್ನಿ ಅದಿತಿ, ಚೆನ್ನೈನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಪತಿ ನಿಧನದಿಂದಾಗಿ ಜಿಗಣಿಗೆ ಬಂದಿದ್ದಾರೆ.