ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.13): ಕನ್ನಡ ಭಾಷೆಯ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾಪುತ್ತೂರ್ಕರ್ ತಿಳಿಸಿದರು.
ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್, ವಾಸವಿ ಮಹಿಳಾ ಸಂಘ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕನ್ನಡದ ಹಬ್ಬ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ನಂತರ ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಮಕ್ಕಳಿಗೆ ಭಾಷೆ, ಶಿಕ್ಷಣದ ಜೊತೆ ಕ್ರೀಡೆಯೂ ಅತ್ಯವಶ್ಯಕ. ಹಳ್ಳಿ ಭಾಗದ ಜಾನಪದ ನಶಿಸುತ್ತಿದೆ. ಕ್ರಿಕೇಟ್‍ಗೆ ಸಿಕ್ಕಷ್ಟು ಪ್ರೋತ್ಸಾಹ ಗ್ರಾಮೀಣ ಕ್ರೀಡೆಗಳಿಗೆ ಇಲ್ಲದಂತಾಗಿದೆ. ಮನಸ್ಸು ಖುಷಿಯಾಗಿದ್ದರೆ ಆರೋಗ್ಯ ಚನ್ನಾಗಿರುತ್ತದೆ. ಕಲೆ ಬೆಳೆದಾಗ ನಿಜವಾಗಿಯೂ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಸಿಗುತ್ತದೆ. ಭಾಷೆ ಬಗ್ಗೆ ಎಲ್ಲರಲ್ಲಿಯೂ ಪ್ರೀತಿ, ಅಭಿಮಾನವಿರಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು.
ಅನಕ್ಷರಸ್ಥರಿಂದ ಜಾನಪದ ಉಳಿದುಕೊಂಡಿದೆ. ಭಾಷೆಯ ಜೊತೆ ಬದುಕುವ ಛಲ, ಆತ್ಮವಿಶ್ವಾಸವನ್ನು ತುಂಬಬೇಕಿದೆ ಎಂದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥಶೆಟ್ಟಿ ಕನ್ನಡ ರಾಜ್ಯೋತ್ಸವ ಕನ್ನಡ ಹಬ್ಬ ಉದ್ಘಾಟಿಸಿ ಮಾತನಾಡುತ್ತ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗವನ್ನು ಒಂದು ಗೂಡಿಸಿ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಭಾಷೆ ಒಂದು ದಿನಕ್ಕೆ ಸೀಮಿತವಾಗಿರಬಾರದು.
ಕನ್ನಡದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಮೈಗೂಡಿಸಿಕೊಂಡಾಗ ಮಾತ್ರ ಭಾಷೆ ಉಳಿಯಲು ಸಾಧ್ಯ. ಕೊರೋನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಕಾರ್ಯಕ್ರಮ ಮಾಡಲು ಆಗಿರಲಿಲ್ಲ. ಈಗ ಮತ್ತೆ ಆರಂಭಗೊಂಡಿದೆ. ಹಾಗಂತ ಮೈಮರೆಯುವುದು ಬೇಡ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.
ಪ್ರೊ.ಟಿ.ವಿ.ಸುರೇಶ್‍ಗುಪ್ತ ಮಾತನಾಡುತ್ತ ಅಮೋಘವಾದ ಪರಂಪರೆ ಕನ್ನಡ ಭಾಷೆಗಿದೆ. ಪ್ರತಿಯೊಬ್ಬರು ಕನ್ನಡವನ್ನು ಮಾತನಾಡುವುದರಿಂದ ಭಾಷೆಗೆ ಗಟ್ಟಿತನ ಬರುತ್ತದೆ. ಅದಕ್ಕಾಗಿ ಕನ್ನಡ ರಾಜ್ಯೋತ್ಸವದಂದು ಎಲ್ಲರೂ ಸೇರಿ ಕನ್ನಡದ ಹಬ್ಬವನ್ನು ಆಚರಿಸಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಆರ್.ವೆಂಕಟೇಶ್‍ಕುಮಾರ್ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಕಲೆ ಇದ್ದೆ ಇರುತ್ತದೆ. ಅದನ್ನು ಹುಡುಕಿ ಹೊರತರುವ ಕೆಲಸವಾಗಬೇಕು. ಆಗ ಮಾತ್ರ ನಿಜವಾದ ಕಲಾವಿದರಿಗೆ ಗೌರವ ಸಿಕ್ಕಂತಾಗುತ್ತದೆ. ಕನ್ನಡಕ್ಕಾಗಿ ಜೀವಮಾನವನ್ನೇ ಸವೆಸಿರುವವರನ್ನು ಗುರುತಿಸಿ ಇಂತಹ ಸಂದರ್ಭಗಳಲ್ಲಿ ಸನ್ಮಾನಿಸಬೇಕು. ಪ್ರವಾಸಿ ಸ್ಥಳ, ನದಿ, ಹೀಗೆ ಹತ್ತು ಹಲವಾರು ವೈಶಿಷ್ಟಗಳುಳ್ಳ ಕರ್ನಾಟಕ ವೈವಿದ್ಯತೆಯಿಂದ ಕೂಡಿದೆ. ಕನ್ನಡವನ್ನು ಮಾತನಾಡಿ ಉಳಿಸಿ ಬೆಳೆಸೋಣ ಎಂದು ವಿನಂತಿಸಿದರು.
ಶ್ರೀಮತಿ ಶೈಲಜಾ ಬಾಬು ಮಾತನಾಡುತ್ತ ಆತ್ಮೀಯವಾದ ಹೃದಯದ ಅಂತರಾಳದಿಂದ ಬರುವ ಗಟ್ಟಿತನದ ಮಾತು ಕನ್ನಡ. ನಮ್ಮ ರಾಜ್ಯವನ್ನು ಕರುನಾಡು, ಕರ್ನಾಟಕ ಎಂದು ಕರೆಯಲಾಗುತ್ತಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯವೂ ಕನ್ನಡಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಕನ್ನಡ ಮಾತೆಯನ್ನು ಆರಾಧಿಸುವುದು ಕನ್ನಡ ರಾಜ್ಯೋತ್ಸವದ ಉದ್ದೇಶ. ಕನ್ನಡ ಎನ್ನುವುದು ಭಾಷೆಯಲ್ಲ. ಒಂದು ಜೀವ. ಕನ್ನಡ ಭಾಷೆಗಳ ಮೇಲೆ ಬೇರೆ ಬೇರೆ ಭಾಷೆಗಳ ದಬ್ಬಾಳಿಕೆ ನಡೆಯುತ್ತಿರುವುದು ನಿಲ್ಲಬೇಕು ಎಂದರು.
ಶ್ರೀಮತಿ ಸುಜಾತ ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು.
ಹೆಚ್.ಎಸ್.ಮಂಜಮ್ಮ ತಿಮ್ಮಶ್ರೇಷ್ಟಿಯವರಿಗೆ ಸನ್ಮಾನಿಸಲಾಯಿತು.
ಶೋಭ ಶ್ರೀನಿವಾಸ್ ಮತ್ತು ತಂಡದವರು ಪ್ರಾರ್ಥಿಸಿದರು. ರಾಜೇಶ್ವರಿ ಸ್ವಾಗತಿಸಿದರು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಧಾ ನಾಗರಾಜ್ ಬಹುಮಾನ ವಿತರಿಸಿದರು.