ನವದೆಹಲಿ: ಕಲಾಪಗಳಲ್ಲಿ ಜನರ ಸಮಸ್ಯೆ, ದೇಶದ ಸಮಸ್ಯೆ, ಆಡಳಿತ ಪಕ್ಷದ ನೀತಿಗಳು ಚರ್ಚೆಯಾದರೆ ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಆದರೆ ಕಲಾಪದಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳೆ ಬೇರೆ ರೀತಿಯದ್ದಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧರಿಸಿದ್ದ ಸ್ಕಾರ್ಫ್, ಪ್ರಧಾನಿ ಮೋದಿ ಧರಿಸಿದ್ದ ಜಾಕೆಟ್ ಬಗ್ಗೆಯೇ ಚರ್ಚೆಗಳು ಶುರುವಾಗಿದೆ.
ಇಂದು ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ ಅದಾನಿ ಗ್ರೂಪ್ ನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯ ಹಾಕುತ್ತಿದ್ದರು. ಇತ್ತಿಚೆಗಷ್ಟೇ ರಾಹುಲ್ ಗಾಂಧಿಯವರು ಕೂಡ ಅದಾನಿ ಗ್ರೂಪ್ ನ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಹಾಕಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಮಾತುಕತೆಯ ನಡುವೆ ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಮಾತನಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಧರಿಸಿದ್ದ ಸ್ಕಾರ್ಫ್ ಬಗ್ಗೆ ಪ್ರಶ್ನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬ್ರಾಂಡೆಡ್ ಸ್ಕಾರ್ಫ್ ಧರಿಸಿದ್ದು, ಅದರ ಬೆಲೆ 56 ಸಾವಿರದ ರೂಪಾಯಿ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು ಪ್ಲಾಸ್ಟಿಕ್ ಬಾಟೆಲ್ ಗಳ ರಿಸೈಕಲ್ ನಿಂದ ಮಾಡಿದ್ದ ಜಾಕೆಟ್ ಅನ್ನು ಧರಿಸಿ ಸಂಸತ್ ಗೆ ಬಂದಿದ್ದರು. ಬೆಂಗಳೂರಿನಲ್ಲಿ ನಡೆದ ಇಂಧನ ಸಪ್ತಾಹದಲ್ಲಿ ಈ ಜಾಕೆಟ್ ಅನ್ನು ಪ್ರದರ್ಶಿಸಲಾಗಿತ್ತು. ಅದೇ ಜಾಕೆಟ್ ಧರಿಸಿ, ಇಂದು ಮೋದಿ ಅವರು ಬಂದಿದ್ದು, ಎಲ್ಲರ ಗಮನ ಸೆಳೆದಿತ್ತು.