ಬೃಹತ್ ಬೆಂಗಳೂರಿನ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ- ಸಿಎಂ

suddionenews
1 Min Read

ಬೆಂಗಳೂರು : ಬೃಹತ್ ಬೆಂಗಳೂರಿನ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿವನಗರ ೧ ಮತ್ತು ೮ನೇ ಮುಖ್ಯರಸ್ತೆ ಕೂಡು ಸ್ಥಳದಲ್ಲಿ ೭೧.೯೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಉದ್ಘಾಟಿಸಿದರು.

ಜನರಿಂದ ಸಲಹೆ ಸೂಚನೆಗಳನ್ನು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಮೊಬೈಲ್‌ನಲ್ಲಿ ಲಭ್ಯವಾಗುವಂತೆ ಮಾಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಶೀಘ್ರದಲ್ಲಿಯೇ ಎಲ್ಲಾ ೨೮ ಕ್ಷೇತ್ರಗಳಲ್ಲಿ ಪ್ರಾರಂಭ ಮಾಡಲಾಗುವುದು. ಅತಿ ಹೆಚ್ಚು ಜನದಟ್ಟಣೆ ಇರುವ ಶಿವನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನದಟ್ಟನೆ ಕಡಿಮೆ ಮಾಡಲು ಇಂಟಿಗ್ರೇಟೆಡ್ ಮೇಲ್ಸೇತುವೆ ಬಹಳ ಸಹಕಾರಿಯಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಡಾವಣೆಯನ್ನು ಒಟ್ಟುಗೂಡಿಸಿರುವ ಕೆಲಸ ಅಭಿನಂದನೀಯ. ತುಮಕೂರು- ಮೈಸೂರು ಹೆದ್ದಾರಿ ಹೈ ಡೆನ್ಸಿಟಿ ಕಾರಿಡಾರ್ ಆಗಿದ್ದು, ವೆಸ್ಟ್ ಆಫ್ ಕರ್ಡ್ ರೋಡ್ ಬಳಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ. ಸೋಪ್ ಫ್ಯಾಕ್ಟರಿ ಯಿಂದ ಮೈಸೂರು ರೋಡ್ ತನಕ ತಡೆರಹಿತ ರಸ್ತೆ ನಿರ್ಮಾಣ ಮಾಡಲು ಬಸವೇಶ್ವರ ನಗರ ಲಿಂಕ್ ಮಾಡುವ ಮಹತ್ವದ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡಿದರೆ ಜನಸ್ಪಂದನೆಯುಳ್ಳ ಜನಪರ ಸರ್ಕಾರ ಎನಿಸಿಕೊಳ್ಳುತ್ತದೆ. ನಗರ ಯೋಜನೆಯ ದೃಷ್ಟಿಕೋನ ಬದಲಾವಣೆ ಆಗಿ, ಬೆಂಗಳೂರಿನ ಯೋಜನಾಬದ್ಧ ಸಮಗ್ರ ಅಭಿವೃದ್ಧಿಯಾಗಬೇಕು ಎಂದ ಅವರು, ಬಂಡವಾಳ ಹೂಡಿಕೆ , ಪ್ರವಾಸೋದ್ಯಮ ಮುಂತಾದ ಎಲ್ಲ ಕ್ಷೇತ್ರಗಳಿಗೂ ಬೆಂಗಳೂರನ್ನು ಗುರುತಿಸಲಾಗುತ್ತದೆ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದ ಸೇವೆಯನ್ನು ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಯೋಜನಾಬದ್ದ ಹಾಗೂ ಹೊಸ ಚಿಂತನೆಯ ಬೆಂಗಳೂರು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *