ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಕೇಳಿದೆ. ಸ್ವತಂತ್ರವಾಗಿ ಗೆದ್ದಿದ್ದ ಸುಮಲತಾ ಈ ಬಾರಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಟಿಕೆಟ್ ಹಂಚಿಕೆಯ ವಿಚಾರಕ್ಕೆ ಮಂಡ್ಯ ಸುದ್ದಿಯಲ್ಲಿದೆ.
ಸುಮಲತಾ ಮತ್ತೆ ಮಂಡ್ಯ ಬಿಟ್ಟುಕೊಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಇಂದು ದಿಶಾ ಸಭೆಯಲ್ಲಿ ಭಾಗಿಯಾಗಿದ್ದ ಸುಮಲತಾ ಅವರು, ಮತ್ತೆ ಸ್ಟ್ರಾಂಗ್ ಆಗಿನೇ ಮಂಡ್ಯದ ಬಗ್ಗೆ ಮಾತನಾಡಿದ್ದಾರೆ. ಮಂಡ್ಯದಿಂದಾನೇ ಸ್ಪರ್ಧೆ ಮಾಡ್ತೀನಿ ಎಂದಿದ್ದಾರೆ.
‘ಜೆಡಿಎಸ್ ಗೆ ಮಂಡ್ಯ ಬಿಟ್ಟುಕೊಡುವ ಅಂತೆ-ಕಂತೆ ಮೊದಲಿನಿಂದಾನೂ ಇದೆ. ಆದರೆ ಈ ಬಾರಿಯೂ ಮಂಡ್ಯದಿಂದಾನೇ ಸ್ಪರ್ಧೆ ಮಾಡಲಿದ್ದೇನೆ. ಬಿಜೆಪಿ ಹೈಕಮಾಂಡ್ ಕೂಡ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಧಿಕೃತ ನಿರ್ಧಾರ ಬರುವ ತನಕ ಕಾಯೋಣಾ. ಮಂಡ್ಯ ಬಿಜೆಪಿಗೆ ಸಿಗುವ ವಿಶ್ವಾಸ ನನಗಿದೆ. ಜೆಡಿಎಸ್ ನಾಯಕರು ಏನು ಬೇಕಾದರೂ ಹೇಳಬಹುದು, ಆದರೆ ಅಧಿಕೃತವಾಗಿ ನಿರ್ಧಾರವಾಗಬೇಕು ಅಲ್ವಾ. ಮಂಡ್ಯದಲ್ಲಿ ನಾನು ನನ್ನ ಟಿಕೆಟ್ ಗಾಗಿ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟವೇನೆ ಇದ್ದರು ಅದು ಮಂಡ್ಯದ ಜನರಿಗೋಸ್ಕರ. ಮಂಡ್ಯದಲ್ಲಿ ಬಿಜೆಪಿ ಸಂಘಟನೆ ಮಾಡಲು ಹೋರಾಟ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಪಡೆಯುವ ಉದ್ದೇಶ ಒಂದಿದ್ದರೆ ಎಲ್ಲಾದರೂ ಟಿಕೆಟ್ ಪಡೆಯುತ್ತಿದ್ದೆ. ಆದರೆ ನಾನು ಹೋರಾಟ ಮಾಡುತ್ತಿರುವುದೇ ಬಿಜೆಪಿ ಪಕ್ಷ ಸಂಘಟನೆ ಮಾಡುವುದಕ್ಕೆ. ಹೀಗಾಗಿ ನಾನು ಮಂಡ್ಯದಿಂದಾನೇ ಸ್ಪರ್ಧೆ ಮಾಡುತ್ತೇನೆ ಎಂದು ಸುಮಲತಾ, ಮುಂದಿನ ಲೋಕಸಭೆಯಲ್ಲಿ ತಮ್ಮ ಚಿತ್ತ ಯಾವ ಕಡೆಗೆ ಎಂಬುದರ ಸ್ಪಷ್ಟನೆ ನೀಡಿದ್ದಾರೆ.