ಬೆಂಗಳೂರು: ಎತ್ತಿನಹೊಳೆ ಯೋಜನೆಯಿಂದ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಈ ಯೋಜನೆಗೆ ಇನ್ನು ಸರಿಯಾದ ಅಡಿಪಾಯ ಬೀಳುತ್ತಿಲ್ಲ. ತಡವಾಗುತ್ತಿರುವುದು ಯಾಕೆ ಎಂಬುದನ್ನು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಈ ಸಂಬಂಧ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದಿಂದ ಬಿಜೆಪಿ ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಯೋಜನೆಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದವು. ಈಗ ನಮ್ಮ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಮಾಡಲಿದೆ. ಇನ್ನು ಎರಡು ವರ್ಷದ ಒಳಗೆ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಯೋಜನೆಗೆ ವರ್ಷದಿಂದ ವರ್ಷಕ್ಕೆ ಅಂದಾಜು ವೆಚ್ಚ ಜಾಸ್ತಿಯಾಗುತ್ತಲೇ ಇರುತ್ತದೆ. ಪ್ರಸ್ತುತ 22 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚವಾಗಿದೆ. ವಾಟರ್ ಸ್ಟೋರೆಜ್ಗಾಗಿ ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ 8 ಲಕ್ಷ ರೂ. ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ 32 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ. ಎಲ್ಲ ರೈತರಿಗೂ ಒಂದೇ ರೀತಿಯ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ. ಇನ್ನು ಎರಡು ವರ್ಷದ ಒಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ. ಈ ಮೂಲಕ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಗೆ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.