ನೀರಿಗಾಗಿ ಹಿರಿಯೂರು ಬಂದ್ : ಭಾಗಶಃ ಯಶಸ್ವಿ

suddionenews
4 Min Read

 

ಹಿರಿಯೂರು : ತಾಲೂಕಿನ ಜೆಜಿ ಹಳ್ಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಐಮಂಗಲ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಹಿರಿಯೂರು ಹಾಗೂ ಜೆಜೆ ಹಳ್ಳಿ ಬಂದ್ ಭಾಗಶಃ ಯಶಸ್ವಿಯಾಗಿತು.

ಬೆಳಿಗ್ಗೆಯಿಂದಲೇ ನಗರ ಹಾಗೂ ಜೆಜಿ ಹಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ತಾಲೂಕು ವರ್ತಕರ ಸಂಘದಿಂದ ರೈತರ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ
ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ ಬಳಿಕ ನೆಹರೂ ಮಾರುಕಟ್ಟೆ ಬಳಿಯ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಸಭೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ ಹಿರಿಯೂರು ರೈತರ ಚಳುವಳಿಯ ಬದ್ಧತೆ ಮೆಚ್ಚುವಂತಹದು. ಇಲ್ಲಿನವು ಧೀರ್ಘಕಾಲಿಕ ಹೋರಾಟಗಳು. ಸರ್ಕಾರದ ಕಾನೂನುಗಳು ಸರ್ಕಾರದ ವ್ಯವಸ್ಥೆಗಳು ಶ್ರೀ ಸಾಮಾನ್ಯನ ಪರವಾಗಿಲ್ಲ. ಕೇಂದ್ರ ಭದ್ರಾ ಯೋಜನೆಗೆ ನೀಡುತ್ತೇವೆ ಎಂದ ಹಣ ಬಿಡುಗಡೆ ಆಗಲಿಲ್ಲ. ಆದರೆ ಜನ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದರು ಎಂದರು.

ರಾಜಕಾರಣಿಗಳಿಗೆ ಜನರ ಮತ ಬೇಕಷ್ಟೆ ಹೊರತು ಅಭಿವೃದ್ಧಿ ಬೇಕಿಲ್ಲ.ರೈತರನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಗಡೆಯ ದಾಳಗಳನ್ನಾಗಿಸಿಕೊಂಡಿವೆ. ಇಡೀ ದೇಶಕ್ಕೆ ಅನ್ನ, ಬಟ್ಟೆ, ಹಾಲು, ಬೆಣ್ಣೆ,ತುಪ್ಪ, ಹಣ್ಣು ಹಂಪಲು ಹಂಚಿದ ರೈತರು ನೆಮ್ಮದಿಯಾಗಿ ಸುಖವಾಗಿ ಇರಬೇಕಿತ್ತು. ಆದರೆ ದುರಂತ ಎಂದರೆ ಇಂದು ರೈತರೇ ನೆಮ್ಮದಿಯಾಗಿಲ್ಲ. ಅಧಿಕಾರ ಇದ್ದಾಗ ಒಂದು, ಅಧಿಕಾರ ಇಲ್ಲದಿದ್ದಾಗ ಒಂದು ಮಾತು ಆಡುವ ರಾಜಕಾರಣಿಗಳು ತುಂಬಿ ತುಳುಕುತ್ತಿದ್ದಾರೆ. ಇಂದು ಒಬ್ಬ ಡಿ. ಗ್ರೂಪ್ ನೌಕರನಿಂದ ಹಿಡಿದು ಎಲ್ಲರ ಬದುಕಿಗೂ ಭದ್ರತೆ ಇದೆ. ಆದರೆ ರೈತರ ಬದುಕಿಗೆ ಭದ್ರತೆಯೇ ಇಲ್ಲದಂತಾಗಿದೆ ಎಂದರು.

ಬಂದ್ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಟಿ. ತಿಪ್ಪೇಸ್ವಾಮಿ ಮಾತನಾಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕಳೆದ 215 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಮುಷ್ಕರೃ ನಡೆಸುತ್ತಿದ್ದಾರೆ. ರೈತರು ಬೀದಿಗೆ ಬಿದ್ದು ಚಳುವಳಿ ಶುರು ಮಾಡಿದ್ದಾರೆ. 2023 ರಲ್ಲಿ ಮಳೆಯಿಲ್ಲದೇ ಕಲ್ಲುವಳ್ಳಿ ಭಾಗದಲ್ಲಿ ಕೆರೆಗಳೆಲ್ಲ ಬತ್ತಿ ಹೋಗಿವೆ. ನಮ್ಮ ಜಿಲ್ಲೆ ಮತ್ತು ತಾಲೂಕು ಅಂತರ್ಜಲ ಮಟ್ಟದಲ್ಲಿ ಭಾರಿ ಇಳಿಕೆ ಕಂಡಿದೆ. ನಮ್ಮ ಮಣ್ಣಿನ ಕೆರೆ ತುಂಬಿಸಿ ಎಂದು ಮಾಡಿದ ಹೋರಾಟವನ್ನು ಸರ್ಕಾರ ಗಮನಿಸುತ್ತಿಲ್ಲ.
ಜೆಜಿ ಹಳ್ಳಿ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು ಸಹ ಕುಡಿಯುವ ನೀರಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮನ್ನು ಆಳಿದ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಿರಿಯೂರು ಬಂದ್ ವಿಷಯ ತಿಳಿದ ಸಿಎಂ ಹಾಗೂ ಇಲ್ಲಿನ ಸಚಿವರು ವಿಧಾನಸೌಧದಲ್ಲಿ ಸಭೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ನಾವು ಸ್ವಾಗತಿಸುತ್ತೇವೆ. ಆದರೆ ಗುರುವಾರ ಬಾಗಿನ ಕಾರ್ಯಕ್ರಮಕ್ಕೆ ಸಿಎಂ ಬರುವಾಗ ಕೆರೆಗೆ ನೀರು ಹರಿಸುವ ಆದೇಶ ತರಬೇಕು ಎಂದು ಒತ್ತಾಯಿಸಿದರು.

ಭದ್ರಾ ನೀರು ತರಲು ಅಲ್ಲಿನ ಬೆಸ್ಕಾo ಬಾಕಿ ಹಣ 66 ಕೋಟಿ ಕಟ್ಟಿದ್ದೇವೆ ಎಂದಿದ್ದಾರೆ. ಆದರೆ ಮಾಹಿತಿ ಹಕ್ಕಲ್ಲಿ ಹಾಕಿ ನಾನೇ ಕೇಳಿದ್ದೇನೆ. 66 ಕೋಟಿ ಬಾಕಿ ಉಳಿದಿಲ್ಲ. ಒಂದೇ ವರ್ಷಕ್ಕೆ 66 ಕೋಟಿ ಬರುತ್ತದಾ ?. ಹನಿ ನೀರಾವರಿ ಮೂಲಕ ಜಮೀನುಗಳಿಗೆ ನೀರನ್ನು ಮಳೆಗಾಲದಲ್ಲಿ ಹರಿಸುತ್ತಾರಂತೆ. ಮಳೆಗಾಲದಲ್ಲಿ ನೀರು ಯಾರಿಗೆ ಬೇಕು. ಈ ಅವೈಜ್ಞಾನಿಕ ಡ್ರಿಪ್ ಇರಿಗೇಶನ್ ಕಾಮಗಾರಿ ನಿಲ್ಲಿಸಬೇಕು. ಇಲ್ಲಿನ ರೈತರಿಗೆ ಮೈಸೂರು ಮಹಾರಾಜರು ಡ್ಯಾಂ ಕಟ್ಟಿಸಿದ್ದಾರೆ. ಆದರೆ ಕಾಲುವೆ ಸ್ವಚ್ಛಗೊಳಿಸುವ ಶಕ್ತಿಯೂ ಸಹ ಈಗಿನವರಿಗಿಲ್ಲ. ನಮ್ಮ ರೈತರಿಗೆ ಯಾವುದೇ ತೊಂದರೆಯಾದರೆ ಸಚಿವರೇ ಹೊಣೆಗಾರರಾಗುತ್ತಾರೆ. ನಾವು ಯಾರ ಆಸ್ತಿಯನ್ನು ಕೇಳಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ. ನಾವು ಯಾರಿಗೂ ಅಂಜುವ ಪ್ರಶ್ನೆಯೇ ಇಲ್ಲ. ಹಿರಿಯೂರಿನ ಪೊಲೀಸರು ನನ್ನ ಮೇಲೆ ಹಲವಾರು ಪ್ರಕರಣಗಳಿವೆ. ಅವರ ಹೋರಾಟಕ್ಕೆ ಯಾರು ಹೋಗಬಾರದು ಎಂದು ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿಯೇ ಇನ್ನಷ್ಟು ರೈತರು ಸೇರುವುದಕ್ಕೆ ಅಡ್ಡಗಾಲಾಗಿದ್ದಾರೆ. ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುವುದು ಸಮಂಜಸವಲ್ಲ. ಇಂತಹ ಕೆಲಸಕ್ಕೆ ಪೊಲೀಸರು ಕೈ ಹಾಕಬಾರದು.ಅಪಪ್ರಚಾರ ಮಾಡಿ ಸಂಘಟನಾ ಶಕ್ತಿ ಕುಂದಿಸುತ್ತೇವೆ ಎಂದರೆ ಅದು ಅವರ ಭ್ರಮೆ ಎಂದರು.

ರೈತ ಮುಖಂಡ ಬಸವರೆಡ್ಡಿ ಮಾತನಾಡಿ ನಾವು ರೈತರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸಿ ಜೈಲಿಗೆ ಹೋಗಿ ಬಂದಿದ್ದೇವೆ ಸುಖ ಸುಮ್ಮನೇ ಜೈಲಿ ಹೋಗಿ ಬಂದಿಲ್ಲ. ಜೈಲಿಂದ ಬಂದ್ಮೇಲೆ ನಮ್ಮ ಮನೆ ಹೆಣ್ಣು ಮಕ್ಕಳು, ನನ್ನ ಗಂಡ ಜೈಲಿಗೆ ಹೋಗಿ ಬಂದಿದ್ದಾರೆಂದು ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಆದರೆ ಹಿರಿಯೂರಿನ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ಸಮಂಜಸವಲ್ಲ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ನಾನು ಇದೇ ಜಿಲ್ಲೆಯವನಾಗಿದ್ದು, ರೈತರು ಜೆಜಿ ಹಳ್ಳಿ ಹೋಬಳಿಯ ಕೆರೆಗೆ ನೀರು ಹರಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ನನಗೆ ತಿಳಿದಿದೆ. ಈ ಭಾಗದ ಜನರ ನೀರಿನ ಸಮಸ್ಯೆಯ ಅರಿವು ನನಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಿಮ್ಮ ಹೋರಾಟಕ್ಕೆ ಪ್ರತಿಫಲ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆ ಬಗ್ಗೆ ಸಿಎಂ ಡಿಸಿಎಂ ಹಾಗೂ ಸಣ್ಣ ನೀರಾವರಿ ಸಚಿವರನ್ನು ಭೇಟಿ ಮಾಡಿ ಬಗ್ಗೆ ಚರ್ಚಿಸಿ ಮನವಿ ಮಾಡಿ ಅನುಧಾನ ನೀಡುವಂತೆ ಕೋರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ರೈತರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಬಸವರೆಡ್ಡಿ, ನಿಜಲಿಂಗಪ್ಪ, ರವಿಕುಮಾರ್, ಜಯರಾಮಪ್ಪ, ಮೀಸೆ ರಾಮಣ್ಣ, ಹನುಮಂತರಾಯ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ್, ರಂಗಸ್ವಾಮಿ, ಶಿವಣ್ಣ, ತಿಮ್ಮಾರೆಡ್ಡಿ, ಸುರೇಶ್, ಚಂದ್ರಣ್ಣ, ಈಶ್ವರಪ್ಪ, ರಾಘು ನಾಥ್, ಎಂಆರ್. ಈರಣ್ಣ, ಅಶ್ವತ್ಥಪ್ಪ,‌ಈರಣ್ಣ, ಗೋವಿಂದಪ್ಪ, ರಂಗಸ್ವಾಮಿ, ಹಮೀದ್ ಹುಸೇನ್, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ ಹಾಗೂ ಚಿತ್ರದುರ್ಗ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *