ಸುದ್ದಿಒನ್, ಚಳ್ಳಕೆರೆ, (ಜೂ.23) : ಮಾಹಿತಿ ತಂತ್ರಜ್ಞಾನದ ಸಮಾಜದಲ್ಲಿ ಪುಸ್ತಕ ಓದುವ ಹವ್ಯಾಸ ಕುಂಠಿತವಾಗುತ್ತಿದೆ ಎಂದು ಲೇಖಕ ಚನ್ನಬಸವ ಪುತ್ತೂರ್ಕರ್ ವಿಷಾದ ವ್ಯಕ್ತಪಡಿಸಿದರು.
ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಕೊರ್ಲಕುಂಟೆ ಕನ್ನಡ ರಕ್ಷಣಾ ಮತ್ತು ಸಾಂಸ್ಕøತಿಕ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಪುಸ್ತಕಗಳ ವಿತರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರೌಡ ಹಂತದಲ್ಲಿ ಪಠ್ಯ ಪುಸ್ತಕಗಳ ಜತೆಗೆ ಕತೆ, ಕವನ ಸಾಹಿತ್ಯ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕ ಪ್ರಾಮಾಣಿಕ ಗೆಳಯನಂತೆ ಬದುಕಿನ ಸಾರ್ಥಕತೆಯ ಮಾರ್ಗವನ್ನು ತೋರಿಸುತ್ತದೆ. ನಿರಂತರ ಓದುವ ಹವ್ಯಾಸ ಸಮಾಜದಲ್ಲಿ ಒಳ್ಳೆಯ ಗೌರವ ಮತ್ತು ಬದುಕಿನ ಭದ್ರತೆ ತಂದುಕೊಡುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಬಿ.ಕೆ. ಮಾಧವರಾವ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಬೆಳಗೆರೆ ಕೃಷ್ಣಶಾಸ್ತ್ರಿ ಮತ್ತು ತಳುಕಿನ ತರಾಸು ಮನೆತನದ ನೆಲೆ ಇದು. ಅವರ ವಾರಸುದಾರರಾಗಿ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು. ಸಿದ್ದಗಂಗಾ ಶ್ರೀಗಳು ಹೇಳಿದ ಹಾಗೆ ಅಕ್ಷರ ದಾಸೋಹ ಸರ್ವಶ್ರೇಷ್ಠ ಎನ್ನುವ ಜಾಗೃತಿ ಬೆಳೆಯಬೇಕಿದೆ. ಶಾಲಾ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳ ಅಭಿರುಚಿ ಬೆಳೆಸುವ ಕಾರ್ಯಕ್ರಮ ಆಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾವತಿ ಪುತ್ತೂರ್ಕರ್ ಮಾತನಾಡಿ, ಕರೊನಾ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಆನ್‍ಲೈನ್ ಮೂಲಕ ಬೋಧನೆ ಮಾಡಲಾಯಿತು. ಇದರಿಂದ ಪುಸ್ತಕದಿಂದ ದೂರ ಉಳಿದ ಮಕ್ಕಳಿಗೆ ಮೊಬೈಲ್ ಮತ್ತು ಟಿವಿಯ ಪ್ರಭಾವ ಬೀರಿದಂತಾಯಿತು. ಪ್ರಸ್ತುತ ಶಾಲಾ ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ ಪುಸ್ತಕವನ್ನು ವಿಮರ್ಶೆ ಮಾಡುವ ಮತ್ತು ಸ್ವ ರಚಿತ ಕವನ ಬರೆಯುವ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುವುದಾಗಿ ಹೇಳಿದರು.
ಶಿಕ್ಷಕಿ ಶೋಭಾ ಮಲ್ಲಿಕಾರ್ಜುನ ಮಾತನಾಡಿ, ಸಾಹಿತ್ಯ ಅಭಿರುಚಿ ಸಂಸ್ಕಾರವನ್ನು ಕಲಿಸುತ್ತದೆ. ಸರ್ಕಾರಿ ಶಾಲೆಯಲ್ಲಿ ಕಲಿತವರು ಸಾಧಕರು ಮತ್ತು ಉನ್ನತ ಅಧಿಕಾರಿಗಳಾಗಿರುವವರ ಬದುಕಿನ ಆದರ್ಶವನ್ನು ರೂಢಿಸಿಕೊಳ್ಳಬೇಕು. ಶಿಕ್ಷಣ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಅತಿ ಹೆಚ್ಚು ಪುಸ್ತಕಗಳನ್ನು ಓದಿಕೊಂಡ ಅಂಬೇಡ್ಕರ್ ವಿಶ್ವದ ಜ್ಞಾನಿ ಎನಿಸಿಕೊಂಡಿದ್ದಾರೆ.
ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಲೋಕಾನುಭವವನ್ನು ಅರ್ಥೈಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಬಿಎಂಶ್ರೀ ಹೇಳಿರುವಂತೆ ಸಾಹಿತ್ಯ ಹವ್ಯಾಸ ಮನಸ್ಸನ್ನು ಜಾಗೃತಿಗೊಳಿಸುವುದಷ್ಟೇ ಅಲ್ಲ, ಹೃದಯವನ್ನು ತೊಳೆದು ಶುದ್ಧಿ ಮಾಡುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಸಾಹಿತ್ಯ ಪುಸ್ತಕಗಳನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪುಸ್ತಕಗಳ ಅನುಭವಗಳಿಂದ ಮಾತ್ರ ಬದುಕಿನ ಸಾರ್ಥಕತೆ ತಿಳಿಯಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ನಯನ, ಶ್ರೇಯಸ್ ಸ್ವರಚಿತ ಪ್ರವಾಸ ಕಥನಗಳನ್ನು ಮಂಡನೆ ಮಾಡಿ ಸಭೆಯ ಮೆಚ್ಚುಗೆ ಪಡೆದರು.
ಪ್ರೌಢಶಾಲಾ ಸಂಘದ ಅಧ್ಯಕ್ಷ ಬಿ. ರಾಜಕುಮಾರ್, ವೇದಿಕೆಯ ಪಂಡರಹಳ್ಳಿ ಶಿವರುದ್ರಪ್ಪ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ಶಿಕ್ಷಕರಾದ ಶಿವಣ್ಣ ಎನ್.ಕೆ. ವೇಣಿ, ಎಚ್.ಎಂ. ಪೂರ್ಣಿಮಾ, ಪ್ರಾಣೇಶ್ ರಾಜಮ್ಮ, ಉಮಾ, ನಾಗರತ್ನಮ್ಮ ಮತ್ತಿತರರು ಇದ್ದರು.