ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಸೊಸೆಗೆ ಸರ್ಕಾರಿ ನೌಕರಿ ಕೊಡಬೇಕು : ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

1 Min Read

 

 

ಸುದ್ದಿಒನ್, ಚಿತ್ರದುರ್ಗ, ಜೂನ್‌. 08 : ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದ ಹಿನ್ನೆಲೆ ದರ್ಶನ್ ಅಂಡ್ ಗ್ಯಾಂಗ್ ಕಡೆಯಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಮನೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿದೆ. ಈ ವೇಳೆ
ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆ- ತಾಯಿ ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಶೀನಾಥ ಶಿವನಗೌಡ, ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷ. ಪುತ್ರ ಶೋಕ ನಿರಂತರಂ ಅಂತಾರೆ. ಮೊಮ್ಮಗನ ಆಟ ಪಾಠ ನೋಡಿಕೊಂಡು ಆ ನೋವನ್ನ ಮರೆಯುತ್ತಿದ್ದೇವೆ. ಆದರೆ ಮಗನ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇನ್ನು ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನ ಫಾಸ್ಟ್ ಟ್ರಾಕ್ ಮೂಲಕ ಮಾಡಬೇಕು. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ನಮಗೆ ಕಾನೂನು, ಸರ್ಕಾರ, ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಆದರೆ ಸೊಸೆಗೆ ಸರ್ಕಾರಿ ನೌಕರಿ ಕೊಡುವುದಕ್ಕೆ ಕಾನೂನು ಪ್ರಕಾರ ಬರುವುದಿಲ್ಲ ಎಂದಿದ್ದಾರೆ. ತಂದೆ ತಾಯಿಯಾಗಿ ನಾವೂ ಆಗ್ರಹ ಮಾಡುವುದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು. ನಟ ಜೈಲಿನಿಂದ ಹೊರ ಬಂದ ಮೇಲೆ ಯಾರೂ ಕೂಡ ನಮ್ಮನ್ನ ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದರೆ ನಮ್ಮ ಹಿರಿಯರು ತೀರ್ಮಾನ ಮಾಡ್ತಾರೆ ಎಂದು ರೇಣುಕಾಸ್ವಾಮಿ ತಂದೆ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹದಿನೇಳು ಮಂದಿಯೂ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಈಗಲೂ ವಿಚಾರಣೆಯನ್ನ ಎದುರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *