ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಮೌಢ್ಯಗಳನ್ನು ಮುಂದಿಟ್ಟುಕೊಂಡು ದಲಿತರಿಗೆ ಅನ್ಯಾಯ ಮಾಡಿದ ಪುರೋಹಿತಶಾಹಿಗಳ ವಿರುದ್ದ ಸೆಟೆದು ನಿಂತು ದಲಿತರಲ್ಲಿ ಜಾಗೃತಿ ಮೂಡಿಸಿದ ಮಹಾನ್ ನಾಯಕ ಪ್ರೊ.ಬಿ.ಕೃಷ್ಣಪ್ಪನವರ ಆಚಾರ ವಿಚಾರಗಳನ್ನು ನೆನಪು ಮಾಡಿಕೊಳ್ಳುವುದೇ ನಿಜವಾಗಿಯೂ ಅವರಿಗೆ ನೀಡುವ ದೊಡ್ಡ ಗೌರವ ಎಂದು ದಲಿತ ಮುಖಂಡ ಡಿ.ದುರುಗೇಶ್ ಹೇಳಿದರು.
ನವಯಾನ ಬುದ್ದ ಧಮ್ಮ ಪಥ-ಚಿತ್ರದುರ್ಗ ವತಿಯಿಂದ ಕ್ರೀಡಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಚಂದ್ರಗುತ್ತಿ÷ಹೋರಾಟ-ಪ್ರೊ.ಬಿ.ಕೆ.ಒಂದು ಮರು ಅವಲೋಕನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪುರೋಹಿತ ಬ್ರಾಹ್ಮಣ್ಯಶಾಹಿಗಳ ವಿರುದ್ದ ಹೋರಾಡಿ 1986 ಮಾ.ನಲ್ಲಿ ಚಂದ್ರಗುತ್ತಿಯಲ್ಲಿ ಮಹಿಳೆಯರ ಬೆತ್ತಲೆ ಸೇವೆ ವಿರುದ್ದ ದೊಡ್ಡ ಹೋರಾಟ ನಡೆಸಿದ ಪ್ರೊ.ಬಿ.ಕೆ.ರವರು ದಲಿತ ಮಹಿಳೆಯರ ಮಾನಭಂಗ ಮಾಡಿ ಸಂಭ್ರಮಿಸುತ್ತಿದ್ದ ಮನುವಾದಿಗಳಿಗೆ ಹೋರಾಟದ ಮೂಲಕ ತಕ್ಕ ಉತ್ತರ ನೀಡಿದರು. ಹೆಂಡ-ಸರಾಯಿ ಬೇಡ ಹೋಬಳಿಗೊಂದು ಶಾಲೆ ಕೊಡಿ ಎಂದು ದಲಿತರ ಏಳಿಗೆಗಾಗಿ ಶ್ರಮಿಸಿದರು.
ಶೈಕ್ಷಣಿಕವಾಗಿ ದಲಿತರು ಅಭಿವೃದ್ದಿಯಾಗಬಾರದೆಂದು ಪುರೋಹಿತಶಾಹಿಗಳು ಆಡಳಿತ ನಡೆಸುವ ಸರ್ಕಾರಕ್ಕೆ ಹೆಂಡ ಸರಾಯಿ ಮಾರಾಟಕ್ಕೆ ಆಹ್ವಾನ ಕೊಡುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಪ್ರೊ.ಬಿ.ಕೃಷ್ಣಪ್ಪನವರ ಹೋರಾಟ, ವಿಚಾರಗಳನ್ನು ಮರುಅವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ರಾಜ್ಯದ್ಯಂತ ಚಳುವಳಿ ನಡೆಸಿ ಬಡ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಕೊಡಿಸಿದ ಪ್ರೊ.ಬಿ.ಕೃಷ್ಣಪ್ಪನವರಲ್ಲಿ ದಲಿತರು ಆರ್ಥಿಕವಾಗಿ ಅಭಿವೃದ್ದಿಯಾಗಬೇಕೆಂಬ ಚಿಂತನೆಯಿತ್ತು. ಸ್ವಾಭಿಮಾನಿಗಳಾಗಿ ಬದುಕುವಂತೆ ದಲಿತರಲ್ಲಿ ಆತ್ಮಸ್ಥೈರ್ಯ ತುಂಬಿದವರು.
ಹಾಗಾಗಿ ಅವರ ಚಿಂತನೆ, ಹೋರಾಟ, ವಿಚಾರಗಳು ಬೇರೆ ಯಾರಿಗಿಂತಲೂ ಕಡಿಮೆಯಿರಲಿಲ್ಲ. ಸದಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಚಿಂತಿಸುತ್ತಿದ್ದರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗೆ ಮತದಾನದ ಹಕ್ಕು ನೀಡಿದರೆ ಪ್ರೊ.ಬಿ.ಕೃಷ್ಣಪ್ಪ ಮತದಾನದ ಶಕ್ತಿ ಏನೆಂಬುದನ್ನು ದಲಿತರಿಗೆ ತೋರಿಸಿಕೊಟ್ಟರು. ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಮರು ಅವಲೋಕನವಾಗಬೇಕು ಎಂದರು.
ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್ ಮಾತನಾಡಿ ಉಸಿರುಗಟ್ಟಿದ ದಲಿತರಲ್ಲಿ ಉಸಿರಾಡುವಂತ ವಾತಾವರಣ ನಿರ್ಮಾಣ ಮಾಡಿದವರು ಪ್ರೊ.ಬಿ.ಕೃಷ್ಣಪ್ಪ. ದಲಿತರ ಮೇಲೆ ಎಲ್ಲಾದರೂ ಹಲ್ಲೆ, ದೌರ್ಜನ್ಯ, ಅತ್ಯಾಚಾರವಾದರೆ ಹೋರಾಟಕ್ಕೆ ಕರೆ ಕೊಡುತ್ತಿದ್ದರು. ಹೆಂಡ ಸರಾಯಿ ಬೇಡ ಹೋಬಳಿಗೊಂದು ಶಾಲೆ ಕೊಡಿ ಎಂದು ಆಳುವ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದರು.
ಚಂದ್ರಗುತ್ತಿಯಲ್ಲಿ ದಲಿತ ಹೆಣ್ಣು ಮಕ್ಕಳು ಬೆತ್ತಲೆ ಸೇವೆ ನಡೆಸುವುದನ್ನು ಕಂಡು ಮಮ್ಮಲ ಮರುಗಿದ ಪ್ರೊ.ಬಿ.ಕೃಷ್ಣಪ್ಪ ಹೋರಾಟದ ಮುಂಚೂಣಿ ನಾಯಕರಾಗಿದ್ದರ ಫಲವಾಗಿ 1986 ಮಾರ್ಚ್ನಲ್ಲಿ ಬೆತ್ತಲೆ ಸೇವೆಯನ್ನು ನಿಷೇಧಿಸಲಾಯಿತು. ಅದಕ್ಕಾಗಿ ಕರ್ನಾಟಕದ ಎಲ್ಲಾ ಕಡೆ ಪ್ರೊ.ಬಿ.ಕೃಷ್ಣಪ್ಪನವರ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಹೊಸದುರ್ಗ ತಹಶೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡುತ್ತ ದಲಿತರ ಮಾತುಗಳು ನಿಂತು ಹೋಗಿರುವುದರಿಂದ ಪ್ರೊ.ಬಿ.ಕೃಷ್ಣಪ್ಪನವರ ನೆನಪು ಮಾಡಿಕೊಳ್ಳುವುದು ಅತ್ಯಗತ್ಯ. ದಲಿತರ ಮೇಲೆ ಎಲ್ಲಿಯಾದರೂ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ, ಬಹಿಷ್ಕಾರ, ಮಾನಭಂಗವಾದರೆ ಪ್ರತಿಕ್ರಿಯಿಸದಂತಾಗಿದ್ದೇವೆ. ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ದದ ಹೋರಾಟದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಪಾತ್ರ ಹಿರಿದು. ಅಂದು ಅವರ ಜೊತೆಯಲ್ಲಿ ಹೋರಾಡಿದ ಎಲ್ಲರೂ ಬದುಕಿ ಬಂದಿದ್ದೆ ಒಂದು ಪವಾಡ ಎಂದು ಸ್ಮರಿಸಿದರು.
ಚಂದ್ರಗುತ್ತಿಯಲ್ಲಿ ದಲಿತ ಮಹಿಳೆಯರು ಬೆತ್ತಲೆ ಸೇವೆ ಮಾಡುವುದನ್ನು ನಿಲ್ಲಿಸುವಂತೆ ಪ್ರೊ.ಬಿ.ಕೃಷ್ಣಪ್ಪನವರು ನಡೆಸಿದ ಹೋರಾಟ ರಾಷ್ಟç ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಿದ ಪರಿಣಾಮ ಸರ್ಕಾರ ಆಯೋಗ ರಚಿಸಿತು. ದೌರ್ಜನ್ಯ, ಶೋಷಣೆಯನ್ನು ಉಗ್ರವಾಗಿ ಖಂಡಿಸುತ್ತಿದ್ದ ಪ್ರೊ.ಬಿ.ಕೆ. ಕಾರ್ಯಕರ್ತರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡಿದ್ದರು. ಅವರ ಹೋರಾಟ ಸದಾ ಜೀವಂತವಾಗಿರಬೇಕಾದರೆ ಚಳುವಳಿಯನ್ನು ಮತ್ತೆ ಕಟ್ಟುವಂತೆ ದಲಿತರಿಗೆ ಕರೆ ನೀಡಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಹಿರಿಯೂರಿನ ಎಂ.ಡಿ.ರವಿ.ಮಾತನಾಡಿ ದಲಿತರಿಗೆ ದೊಡ್ಡ ಶಕ್ತಿಯಾಗಿದ್ದ ಪ್ರೊ.ಬಿ.ಕೃಷ್ಣಪ್ಪನವರ ಹೋರಾಟ ಆಚಾರ, ವಿಚಾರಗಳು ರಾಜ್ಯದಲ್ಲಿ ಹಚ್ಚ ಹಸಿರಾಗಿ ಉಳಿಯಬೇಕಾಗಿರುವುದರಿಂದ ಇಂತಹ ವಿಚಾರ ಸಂಕಿರಣಗಳು ಎಲ್ಲೆಡೆ ನಡೆಯಬೇಕು. ಆಗ ಮಾತ್ರ ಪ್ರೊ.ಬಿ.ಕೆ.ರವರ ಹೋರಾಟದ ಹೆಜ್ಜೆಗಳಲ್ಲಿ ಎಲ್ಲರೂ ಸಾಗಲು ಸಾಧ್ಯ ಎಂದು ಹೇಳಿದರು.
ಪ್ರೊ.ಬಿ.ಕೆ.ರವರ ಬದುಕು ಮತ್ತು ಶಿಕ್ಷಣ ಕುರಿತು ಶಿಕ್ಷಕ ಸಿದ್ದೇಶ್, ಹೋರಾಟಗಳು ಕುರಿತು ವಿಶ್ವಾನಂದ ಕೆ.ವದ್ದಿಕರೆ, ಪ್ರೊ.ಬಿ.ಕೆ.ಮತ್ತು ಚಂದ್ರಗುತ್ತಿ ಹೋರಾಟ ಕುರಿತು ಪ್ರಾಧ್ಯಾಪಕ ಡಾ.ಕೆ.ಆರ್.ಜೆ.ರಾಜ್‌ಕುಮಾರ್ ಗೋಷ್ಟಿ-1 ರಲ್ಲಿ ಮಾತನಾಡಿದರು.
ನವಯಾನ ಬುದ್ದ ಧಮ್ಮ ಪಥದ ಪ್ರೊ.ಸಿ.ಕೆ.ಮಹೇಶ್, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಲೇಖಕ ಹೆಚ್.ಆನಂದ್‌ಕುಮಾರ್, ದಲಿತ ಮುಖಂಡ ಕೈನಡು ಚಂದ್ರಪ್ಪ, ಹೊಳಿಯಪ್ಪ. ಡಾ.ಡಿ.ಶ್ರೀನಿವಾಸ್‌ರಾಜು ವೇದಿಕೆಯಲ್ಲಿದ್ದರು.