ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಪೋಷಕರು ಆತಂಕಗೊಂಡಿದ್ದಾರೆ. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸದ್ಯ ಉಕ್ರೇನ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ಅಲ್ಲಿಯೇ ತಂಗಿದ್ದಾರೆ. ಈಗ ಅಲ್ಲಿನ ಯುದ್ಧ, ವಾತಾವರಣದಿಂದ ಇಲ್ಲಿ ಪೋಷಕರು ಗಾಬರಿಯಾಗಿದ್ದಾರೆ.
ಅಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನ ವಾಪಾಸ್ ಕರೆ ತರುವ ಜವಬ್ದಾರಿ ಸರ್ಕಾರದ್ದು. ಅದರ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕೇಂದ್ರದ ವಿದೇಶಾಂಗ ಸಚಿವರ ಬಳಿ ಮಾತನಾಡಿದ್ದೇನೆ. ಈಗಾಗಲೇ ಎರಡು ಹೆಲ್ಪ್ ಲೈನ್ ವ್ಯವಸ್ಥೆ ಮಾಡಲಾಗಿದೆ. ವೆಸ್ಟರ್ನ್ ಭಾಗದಲ್ಲಿದ್ದ ಕನ್ನಡಿಗರನ್ನ ಮೊದಲ ತಂಡವಾಗಿ ಭಾರತಕ್ಕೆ ಕರೆತರಲಾಗಿದೆ. ಮುಂಬೈನಿಂದಲೂ ಕರೆತರುವ ವ್ಯವಸ್ಥೆ ಬಗ್ಗೆ ಮಾತನಾಡಲಾಗಿದೆ. ದೆಹಲಿ ಹೈ ಕಮೀಷನರ್ ಗೂ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ನಾನು ಮಾತನಾಡಿದ್ದೇನೆ. ಎಲ್ಲರನ್ನು ಸುರಕ್ಷಿತವಾಗಿ ವಾಪಾಸ್ ಕರೆತರುವ ವ್ಯವಸ್ಥೆ ಆಗಿದೆ. ಭಯ ಪಡುವ ಅಗತ್ಯವಿಲ್ಲ. ಎಲ್ಲದಕ್ಕೂ ಸರ್ಕಾರವೇ ವೆಚ್ಚ ಭರಿಸಲಿದೆ ಎಂದಿದ್ದಾರೆ.