ಸರ್ಕಾರ ಲಿಂಗಾಯತ ಸಮುದಾಯದವನ್ನು ಸರಿಯಾಗಿ ಗಣತಿ ಮಾಡಿಲ್ಲ : ಕೆ.ಬಿ.ಶ್ರೀನಿವಾಸ್

3 Min Read

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ. 07 : ಕಾಂತರಾಜ್ ಆಯೋಗದ ಜಾತಿಗಣಿತಿಯ ವರದಿಯು ತಾಂತ್ರಿಕವಾಗಿ ಸರಿ ಆಗಿರುವುದಿಲ್ಲ.ಇದರ ಬಗ್ಗೆ ನಮ್ಮ ತಕರಾರು ಇದೆ. ರಾಜ್ಯದಲ್ಲಿ ಸುಮಾರು ಒಂದುವರೆ ಕೋಟಿ ವೀರಶೈವ ಲಿಂಗಾಯತ ಸಮುದಾಯದವರಿದ್ದಾರೆ.ಕೆಲವು ಕಡೆ ಜಾತಿಗಣತಿ ಸರಿಯಾಗಿಲ್ಲ. ಇದರ ಬಗ್ಗೆ ನಮ್ಮ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಖಂಡ್ರೆ ರವರು ಸರ್ಕಾರದ ಗಮನ ಸೆಳೆಯಲಿದ್ದಾರೆ.ಸರ್ಕಾರ ಅನುಮತಿ ನೀಡಿದರೆ 18 ತಿಂಗಳೊಳಗೆ ರಾಜ್ಯದಲ್ಲಿನ ಲಿಂಗಾಯಿತರ ಜಾತಿ ಜನಗಣತಿಯನ್ನು ನಡೆಸಿ ಅಂಕಿ ಅಂಶವನ್ನು ಸರ್ಕಾರಕ್ಕೆ ನೀಡಲಿದ್ದೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಜ್ಯ ಉಪಾದ್ಯಕ್ಷರಾದ ಕೆ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಲಿಂಗಾಯತ ಸಮುದಾಯದವನ್ನು ಸರಿಯಾದ ರೀತಿಯಲ್ಲಿ ಜನಗಣತಿ ಮಾಡಿಲ್ಲ, ಮನೆ, ಮನೆಗಳಿಗೆ ಭೇಟಿಯನ್ನು ನೀಡಿದೆ ವರದಿಯನ್ನು ನೀಡಿದ್ದಾರೆ, ಇದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಒಪ್ಪುವುದಿಲ್ಲ, ಇದರ ಬದಲಿಗೆ ನಾವೇ 18 ತಿಂಗಳ ಕಾಲ ರಾಜ್ಯದಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ, ಹೋಬಳಿಯಲ್ಲಿ ಪ್ರವಾಸ ಮಾಡುವುದರ ಮೂಲಕ ನಮ್ಮ ಲಿಂಗಾಯತ ಸಮುದಾಯದವರು ಎಷ್ಟು ಇದ್ದಾರೆ ಎಂಬ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗುವುದು ಇದರ ಬಗ್ಗೆ ನಮ್ಮ ಮುಖಂಡರಾದ ಈಶ್ವರ ಖಂಡ್ರೆ ರವರು ಸರ್ಕಾರದ ಗಮನ ಸೆಳೆಯಲಿದ್ದಾರೆ. ಈಗಾಗಲೇ ನಮ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರು ವರದಿಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ. ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಠ 10 ಸಾವಿರ ಸದಸ್ಯರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರ ಬಗ್ಗೆ ಈಗಾಗಲೇ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವೀರಶೈವ ಮತ್ತು ಲಿಂಗಾಯತರು ಒಂದೇ ಎನ್ನುವುದೇ ಮತ್ತು ಈ ಭಾವನೆ ನಮ್ಮ ಸಮಾಜದಲ್ಲಿ ಬೆಳಸುವುದೇ ನಮ್ಮ ಮುಖ್ಯ ಉದ್ದೇಶ ಮತ್ತು ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ ಇಂದಿನಿಂದಲೇ ಸದಸ್ಯತ್ವ ಅಭೀಯಾನವನ್ನು ಪ್ರಾರಂಭ ಮಾಡಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿಯೂ ಯುವ ಮತ್ತು ಮಹಿಳಾ ಘಟಕಗಳನ್ನು ರಚನೆ ಮಾಡಲಾಗುವುದು ಇದರಿಂದ ಸಮಾಜದ ಯುವ ಜನತೆ ಹಾಗೂ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಲಾಗುವ ಗುರಿಯನ್ನು ಹೊಂದಲಾಗಿದೆ ಎಂದರು.

 

ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಯರ ನಿಲಯಗಳನ್ನು ಕಟ್ಟಲು ಭೂಮಿಯನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಲಿಂಗಾಯತ ಸಮುದಾಯದ ಕೆಲವು ಉಪ ಪಂಗಡಗಳು ಮಾತ್ರ ಕೇಂದ್ರದ ಒಬಿಸಿಗೆ ಸೇರಿವೆ.ಆದರೆ ವೀರಶೈವ ಲಿಂಗಾಯಿತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕೆಂದ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ ಈ ಹೋರಾಟದಲ್ಲಿ ಜಯ ಸಿಗಲಿದೆ ಎಂಬ ನಂಬಿಕೆ ಇದೆ. ಇದರ ಬಗ್ಗೆ ರಾಜ್ಯ ಸರ್ಕಾರವೂ ಸಹಾ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.

 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ಯಾಮನೂರು ಶಿವಶಂಕ್ರಪ್ಪ, ರಾಜ್ಯ ಅಧ್ಯಕ್ಷರಾಗಿ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯಾದ ಶಂಕರ್ ಬಿದಿರೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ನಮ್ಮ ಮಹಾಸಭಾ ನಡೆಯಲಿದೆ, ನಮ್ಮ ಹೋರಾಟಗಳು ಸಹಾ ಇವರ ಮುಖಂಡತ್ವದಲ್ಲಿ ನಡೆಯಲಿವೆ ಎಂದ ಅವರು.ರಾಜ್ಯದಲ್ಲಿನ ಮಠಗಳು ಶಿಕ್ಷಣ ಹಾಗೂ ಅನ್ನದಾನದಲ್ಲಿ ಮಹತ್ವವಾದ ಸಾಧನೆಯನ್ನು ಮಾಡಿವೆ, ಇದನ್ನು ರಾಜಕೀಯಬ ಪಕ್ಷಗಳು ಸರಿಯಾದ ರೀತಿಯಲ್ಲಿ ಪರಿಗಣಿಸಿಲ್ಲ, ಚುನಾವಣೆ ಸಮಯದಲ್ಲಿ ಮಾತ್ರ ಮಠಗಳಿಗೆ ಭೇಟಿ ನೀಡಿ ಶ್ರೀಗಳಿಂದ ಆರ್ಶೀವಾದವನ್ನು ಡಪೆದು ಗೆಲುವು ಸಾಧಿಸುತ್ತಾರೆ ತದ ನಂತರ ನಮ್ಮ ಬೇಡಿಕೆಗಳ ಬಗ್ಗೆ ಗಮನ ನೀಡುತ್ತಿಲ್ಲ ಎಂದು ದೂರಿದರು.

 

ಗೋಷ್ಟಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷರಾದ ಎಂ.ವಿ.ಶಿವಮೂರ್ತಿ ಮಾತನಾಡಿ, ನಮ್ಮ ಮಹಾಸಭಾದಿಂದ ಪ್ರತಿ ಜಿಲ್ಲೆಯಲ್ಲಿಯೂ ಸಹಾ ಹಾನಗಲ್ಲು ಕುಮಾರಸ್ವಾಮಿಯವರ ಸಭಾ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಇದರ ನಿರ್ಮಾಣಕ್ಕೆ ಜಾಗವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು, ಇದ್ದಲ್ಲದೆ ಸರ್ಕಾರದ ಜಾಗವನ್ನು ಸಹಾ ಗುರುತಿಸಲಾಗಿದೆ, ಇದನ್ನು ನಮಗೆ ನೀಡಿದೆ ಮುಂದಿನ ದಿನದಲ್ಲಿ ಭೂಮಿ ಪೂಜೆಯನ್ನು ನಡೆಸಲಾಗುವುದು ನಮ್ಮ ಅಧಿಕಾರದ ಅವಧಿಯಲ್ಲಿ ಈ ಕಟ್ಟಡವನ್ನು ಸರ್ಕಾರ, ದಾನಿಗಳ ಸಹಾಯದಿಂದ ಪೂರ್ಣವಾಗಿ ನಿರ್ಮಾಣ ಮಾಡಲಾಗುವುದು ಎಂದರು.

 

ಗೋಷ್ಟಿಯಲ್ಲಿ ಬಸವರಾಜಯ್ಯ, ಶಶಿಧರ್, ನಾಗೇಶ್, ಮಂಜುನಾಥ್, ದಿವಾಕರ್, ಪ್ರಸನ್ನಕುಮಾರ್, ರುದ್ರಪ್ಪ ಗೌಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *