ಹಾಸನ: ಜಿಲ್ಲೆಯಲ್ಲಿ ಒಂದೇ ಕುಟುಂಬದ ಒಂಭತ್ತು ಮಂದಿ ಧಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಕುಟುಂಬಸ್ಥರೆಲ್ಲಾ ಸೇರಿ ಧರ್ಮಸ್ಥ ಮಂಜುನಾಥ ಹಾಗೂ ಹಾಸನಾಂಬೆಯ ದರ್ಶನಕ್ಕಾಗಿ ಟೆಂಪೋ ಟ್ರಾವೆಲ್ ಮಾಡಿಕೊಂಡು ಹೋಗಿದ್ದರು. ದೇವರ ದರ್ಶನ ಮುಗಿದ ಬಳಿಕ ವಾಪಾಸ್ ಆಗುತ್ತಿದ್ದಾಗ ಸರ್ಕಾರಿ ಬಸ್ ಹಾಗೂ ಹಾಲಿನ ಟ್ಯಾಂಕರ್, ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಒಂದೇ ಕುಟುಂಬದ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಟೆಂಪೋದಲ್ಲಿ ಟ್ರಾವೆಲ್ ಮಾಡುತ್ತಿದ್ದರು. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರಲ್ಲಿ ಎರಡು ವರ್ಷದ ಮಗು ಕೂಡ ಇದ್ದು, ಮಗುವಿನ ಫೋಟೋ ನೋಡಿದರೆ ಎಂಥವರಿಗೂ ವಿಧಿ ಮೇಲೆ ಕೋಪ ಬರುತ್ತಿದೆ.