ಇಂದಿನಿಂದ ವೇಣುಕಲ್ ಗುಡ್ಡದಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಯತ್ತಪ್ಪನ ಜಾತ್ರೆ ಆರಂಭ

4 Min Read

ಸುದ್ದಿಒನ್ ವಿಶೇಷ ವರದಿ

ಹಿರಿಯೂರು : ಬುಡಕಟ್ಟು ಕಾಡುಗೊಲ್ಲ ಸಮುದಾಯ ಚಿತ್ತಮುತ್ತಿ ಕುಲದ ಕರಡಿಗೊಲ್ಲರ (ಮಾರನರ ಬೆಡಗು) ಆರಾಧ್ಯ ದೈವ ಈರಗಾರ ವೇಣುಕಲ್ ಗುಡ್ಡದ ಶ್ರೀ ಯತ್ತಪ್ಪ ಸ್ವಾಮಿಯ ಜಾತ್ರಾ ಮಹೋತ್ಸವ ಡಿಸೆಂಬರ್ 1 ಮತ್ತು 3 ರಂದು ಅದ್ದೂರಿಯಾಗಿ ಜರುಗಲಿದೆ.

ಈ ಜಾತ್ರಾ ಮಹೋತ್ಸವದ ವಿಶೇಷತೆ ಎಂದರೆ ಜಾತ್ರೆ ಆರಂಭದ ದಿನ ಹಟ್ಟಿ ಬೆಳಗು ಪೂಜೆ ಕಾರ್ಯಕ್ರಮ ಜರುಗಲಿದೆ. ಸಮುದಾಯದ ಮಹಿಳೆಯರು ಮನೆಯನ್ನು ಶುದ್ದಿಗೊಳಿಸಿ ಅಡುಗೆ ಮನೆಯಲ್ಲಿನ ಹಾಲಿನ ಪಾತ್ರೆ, ಮುದ್ದೆ ಪಾತ್ರೆ, ಮರ, ಜರಡಿ, ಕಡಗೋಲು, ಮುದ್ದೆಕೊಲು, ಲೋಟ, ಚೊಂಬು, ಇಟ್ಟಣಿಗೆ, ಇನ್ನೀತರ ಸಾಮಾಗ್ರಿಗಳನ್ನು ಬಿದಿರಿನ ಗೂಡೆಯಲ್ಲಿಟ್ಟುಕೊಂಡು ಸೋಬಾನೆ ಪದ ಹೇಳುವ ಮೂಲಕ ನೀರು ಇರುವ ಹಳ್ಳಕ್ಕೆ ಕೊಂಡೊಯ್ದು ಅವುಗಳನ್ನು ಶುದ್ಧಿಯಾಗಿಸಿ, ಗೋವು ಹಾಕಿಕೊಂಡು ಬಂದು ದೇವಾಲಯದಲ್ಲಿ ಪೂಜೆ ನೇರವೇರಿಸಿ ಮನೆಗೆ ಹೋಗುವರು. ನಂತರದ ದಿನ ಮುಂಜಾನೆ ದೇವಾಲಯದ ಪಟ್ಟದ ಕುದುರೆಯೊಂದಿಗೆ ಹಟ್ಟಿ ಜನರು ಹಾಗೂ ಭಕ್ತರು ತೆರಳಿ 101 ಎಡೆ ಮೂಲಕ ಹುತ್ತದ ಪೂಜೆ ಮುಗಿಸಿ ಯತ್ತಪ್ಪನ ಕಟ್ಟೆಗೆ ಹೋಗಿ ಮಜ್ಜನ ಬಾವಿಯಲ್ಲಿ ಗಂಗಾಪೂಜೆ ನೇರವೇರಿಸುವರು. ಇದೇ ಸ್ಥಳದಲ್ಲಿ ಜಾತ್ರೆಗೆ ಜನ ಸೇರುವುದು. ನಂತರ ದೇವರ ಮೆರವಣಿಗೆ ನಡೆಯಲಿದೆ. ಅದಾದ ಎರಡು ದಿನದ ನಂತರ ಬೆಳಿಗ್ಗೆ ನಾಗಣ್ಣ ನಾಗಮ್ಮ ದೇವರು ಮತ್ತು ಚಿತ್ರಲಿಂಗೇಶ್ವರ ಸ್ವಾಮಿಯ ಆನೆ ಅಂಬಾರಿ, ಕದರಿ ನರಸಿಂಹ ಸ್ವಾಮಿಯ ಸಿಂಹವಾಹನೋತ್ಸವ ಹಾಗೂ ಗರುಡವಾಹನೋತ್ಸವದೊಂದಿಗೆ ಗೊಲ್ಲಹಳ್ಳಿ ರಸ್ತೆಯಲ್ಲಿರುವ ಶ್ರೀ ವೀರನಾಗಮ್ಮನ ಗುಡ್ಡೆಗೆ ತೆರಳಿ ಅಲ್ಲಿರುವ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಿಟ್ಟಕ್ಕಿ ಏರುವುದು ಬಳಿಕ ಉಂಡೆ ಮಂಡೆ ಕಾರ್ಯ ಮುಗಿಸಿ ಸಂಜೆ ಗ್ರಾಮದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಲಿದ್ದು ಇದು ಯತ್ತಪ್ಪನ ಜಾತ್ರೆಯ ವಿಶೇಷತೆಯಾಗಿದೆ.

ವಿ.ಕೆ ಗುಡ್ಡ ಗ್ರಾಮದಲ್ಲಿ ಸುಮಾರು 250 ವರ್ಷಗಳ ಹಿಂದೆ ಅಂಬೆರಾಯ ಮತ್ತು ತುಂಬೆರಾಯ ಎಂಬ ಪಶುಪಾಲಕರಿಬ್ಬರು ಹಸುಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಹಾಗಾಗಿ ಶಿವನಲ್ಲಿ ಬೇಡಿಕೊಂಡಾಗ “ಶಿವನ ಅನುಗ್ರಹದಿಂದ ಯತ್ತಪ್ಪನು ಉದ್ಬವಿಸಿದನು” ಅಥವಾ “ಯತ್ತು ತುಪ್ಪದಲ್ಲಿ ಹುಟ್ಟಿದವನೇ ಯತ್ತಪ್ಪ” ಎಂತಲೂ ಹೇಳಲಾಗುತ್ತದೆ. ಈತನನ್ನು ಯತ್ತಪ್ಪ, ಯತ್ತಯ್ಯ ಹಾಗೂ ಯತ್ತೇಗೌಡ ಎಂತಲೂ ಕರೆಯುತ್ತಾರೆ.


ಕಾಡುಗೊಲ್ಲರ ಪ್ರಥಮ ಸಂಘಟಕ ಹಾಗೂ ಈರಗಾರನಾದ ಯತ್ತಪ್ಪನು ಅಪಾರ ಜ್ಞಾನವುಳ್ಳ ಚತುರ ಹಾಗೂ ಸ್ಪೂರದ್ರೂಪಿಯಾಗಿದ್ದನು. ಗೋವುಗಳ ಬಗ್ಗೆ ಅಪಾರವಾದ ಪಾಂಡಿತ್ಯ ಹೊಂದಿದ್ದ ಯತ್ತಪ್ಪನು ಬದುಕಿನಲ್ಲಿ ಸತ್ಯ, ಪ್ರಾಮಾಣಿಕತೆ, ನೈತಿಕತೆಯನ್ನು ರೂಡಿಸಿಕೊಂಡಿದ್ದನು. ಅಕ್ಷರ ಜ್ಞಾನವಿಲ್ಲದಿದ್ದೂ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಯತ್ತಪ್ಪ ಆಟಗಳಲ್ಲಿ ಜಯಗಳಿಸುತ್ತಿದ್ದನು. ಒಮ್ಮೆ ಕೊಡಿಹಳ್ಳಿ ಬಳಿ ಇರುವ ಪುರುಶುರಾಮನ ಕೆರೆ ಬಳಿ ಯತ್ತಪ್ಪ ಚಿಕ್ಕಂದಿ ಎಂಬ ಗೋವು ಬೇವಿನ ಮರವನ್ನು ಹಾರಿ ಜೂಜಾಟದಲ್ಲಿ ಗೆದ್ದಿತ್ತು ಎಂಬ ದೊಡ್ಡ ಪ್ರತಿತಿ ಇದೆ.

ಯತ್ತಪ್ಪನು ಮದುವೆ ವಯಸ್ಸಿಗೆ ಬಂದ ಮೇಲೆ ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಗೆಜ್ಜೆಕಾಲು ಮಲ್ಲಮ್ಮನ ಜೊತೆ ಮದುವೆಯಾಗಿತ್ತು. ಮದುವೆಯಾದರೂ ಸಹ ಗೋ ಸಾಕಾಣಿಕೆಯನ್ನು ಮುಂದುವರಿಸಿಕೊಂಡಿದ್ದನು.

ಯತ್ತೇಗೌಡನು ಬರಗಾಲದ ಹಿನ್ನೆಲೆಯಲ್ಲಿ ಗೋವುಗಳ ಸಾಕಾಣಿಕೆಗೆ ವೇಣುಕಲ್ಲು ಗುಡ್ಡ ಅಲ್ಲದೇ ಹಿರಿಯೂರು, ಚಳ್ಳಕರೆ, ಶಿರಾ, ಸೊಂಡೂರು, ಆಂಧ್ರಪ್ರದೇಶದ ಗುತ್ತಿ ಪ್ರದೇಶದವರೆಗೂ ಗೋವುಗಳನ್ನು ಮೇಯಿಸಲು ಹೋಗುತ್ತಾನೆ. ಈ ಮಧ್ಯೆ ಯತ್ತಯ್ಯ ಗೋವುಗಳನ್ನು ಸಂಡೂರಿನ ಕಾವಲಿಗೆ ಹೊಡೆದುಕೊಂಡು ಹೋದಾಗ ತಂತ್ರ ಹಾಗೂ ಮೋಸದಿಂದ ಸೊಂಡೂರಿನ ಬೊಮ್ಮನಿಂದ ಯತ್ತೇಗೌಡ ಕೊಲೆಯಾಗುತ್ತಾನೆ. ( ವೇಣುಕಲ್ ಗುಡ್ಡದ ಬೋರಿಯ ಪ್ರೀತಿಯನ್ನು ನಿರಾಕರಿಸಿದಕ್ಕೆ)
ಕೊಲೆಯಾದ ಯತ್ತಪ್ಪನ ಸಮಾಧಿ ಚಳ್ಳಕರೆ ತಾಲೂಕಿನ ತಳುಕಿನ ಗುಡ್ದದಲ್ಲಿ ಇರುವುದನ್ನು ಕಾಣಬಹುದಾಗಿದೆ ಎಂದು ಕಾಡುಗೊಲ್ಲರ ಸಂಶೋಧಕ ಡಾ. ದೊಡ್ಡಮಲ್ಲಯ್ಯ ವಿವರಿಸಿದರು.

ತಾಲೂಕಿನ ವೇಣುಕಲ್ ಗುಡ್ಡ ಗ್ರಾಮದಲ್ಲಿ ಇದೇ ತಿಂಗಳ 28 ರಿಂದ ಜಾತ್ರೆ ಆರಂಭಗೊಂಡಿದ್ದು ನ 28 ರಂದು ಹಟ್ಟಿ ಬೆಳಗು ಪೂಜೆ, ನ.29 ಝಾಂಡೇದ ಮರ ಪೂಜೆ, 30 ರಂದು ಹಾಲು ಮೀಸಲು ಕರೆಯುವುದು, ಡಿಸೆಂಬರ್. 1 ರಂದು ಸೋಮವಾರ ಬೆಳಿಗ್ಗೆ 6:30 ಕ್ಕೆ ಹುತ್ತದ ಪೂಜೆ ಮುಗಿದ ಬಳಿಕ ಶ್ರೀ ಯತ್ತಪ್ಪ ಸ್ವಾಮಿ ಕಟ್ಟೆಗೆ ಹೋಗಿ ಗಂಗಾ ಪೂಜೆ ನೆರವೇರಿಸಲಾಗುವುದು. ಸಂಜೆ ಮೆರವಣಿಗೆ ನಂತರ ಎಡೆ ಹಾಕುವುದು. ಡಿ.2 ರಂದು ಮಂಗಳವಾರ ಬೆಳಿಗ್ಗೆ ಅಣ್ಣ ತಮ್ಮಂದಿರು ಅಕ್ಕಿ ಅಳೆಯುವುದು, ಮಧ್ಯಾಹ್ನ 3 ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 9 ಗಂಟೆಗೆ ಕುಡುಕ ಕಟ್ಟಿದ ತಾಳಿ ಸಾಮಾಜಿಕ ನಾಟಕ ಪ್ರದರ್ಶನ, ಡಿ.3ರಂದು ಬುಧವಾರ ಬೆಳಿಗ್ಗೆ 9:30ಕ್ಕೆ ಶ್ರೀ ವೀರ ನಾಗಮ್ಮನ ಗುಡ್ಡೆ ಪೂಜೆ, ಡಿ.4 ರಂದು ಗುರುವಾರ ಬೆಳಿಗ್ಗೆ 6 ಗಂಟೆಗೆ ದೇವರು ಗುಡಿದುಂಬುವುದು. ನಂತರ ಅಣ್ಣ-ತಮ್ಮಂದಿರ ಜಾಡಿಯ ಮೇಲೆ ಖರ್ಚು ವೆಚ್ಚ ಹಾಕಿ, ನಂತರ ಎಡೆ ಹಿಡಿಯುವುದು. ಡಿ. 6ರಂದು ಶನಿವಾರ ಮರು ದೀಪೋತ್ಸವ ದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇದಕ್ಕೂ ಮುನ್ನ ಗ್ರಾಮದ ಪೂಜಾರಿಗಳು, ಯಜಮಾನರು, ಗೌಡರು ಹಾಗೂ ಗುಡಿಕಟ್ಟಿನ ಅಣ್ಣತಮ್ಮಂದಿರು ಪಾದಯಾತ್ರೆ ಮೂಲಕ ಪಾವಗಡ ತಾಲೂಕಿನ ಪಾಲೇನಹಳ್ಳಿಯ ಚಿತ್ರಲಿಂಗೇಶ್ವರ ಸ್ವಾಮಿಯ ಮೂಲ ಸನ್ನಿಧಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಬಂದಮೇಲೆ ಅಜ್ಜಿಕಟ್ಟೆ ಬಳಿ ಇರುವ ವಾಸೆಕಲ್ಲಿಗೆ ಪೂಜೆ ಸಲ್ಲಿಸಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತದೆ.

ಇದೇ ಗ್ರಾಮದವರಾದ ಕದ್ರೆಗೌಡರ ಮುದ್ದಪ್ಪ ಮಾತನಾಡಿ
ಕಾಡುಗೊಲ್ಲರಾದ ನಾವು ಈ ಹಬ್ಬವನ್ನು ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಕರಡಿಗೊಲ್ಲರ ಬೆಡಗಿನ ಸಂಪ್ರದಾಯದಂತೆ ಜಾತ್ರೆ ಒಂದು ವಾರ ಕಾಲ ನಡೆಯಲಿದೆ. ಈ ಜಾತ್ರೆಗೆ ಹಿರಿಯೂರು ಅಲ್ಲದೆ ಚಳ್ಳಕೆರೆ, ಶಿರಾ, ಪಾವಗಡ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಸಂತಾನ ಭಾಗ್ಯ, ಆರೋಗ್ಯ, ಕಂಕಣಭಾಗ್ಯ, ಆರೋಗ್ಯ ವೃದ್ಧಿ ಕರುಣಿಸುವ ಪವಾಡ ಪುರುಷ ಯತ್ತಪ್ಪ ಎಂದು ಹೇಳಿದರು.

Share This Article