ಹೊಳಲ್ಕೆರೆ; (ಏ.22) : ಮುಸ್ಲಿಂರು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಬಡವರಿಗೆ ನೀಡಿ ಆಚರಿಸುವ ರಂಜಾನ್ ಹಬ್ಬ, ನಾಡಿಗೆ ಒಳ್ಳೆಯ ಸಂದೇಶ ರವಾನಿಸುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ರಂಜಾನ್ ಹಬ್ಬವು ದಾನ ಧರ್ಮದ ಪ್ರತೀಕವಾಗಿದೆ. ಸಮಾಜದ ಎಲ್ಲಾ ಸಮುದಾಯದವರು ಪರಸ್ಪರ ಭಿನ್ನಾಭಿಪ್ರಾಯ ಹಾಗೂ ತಪ್ಪು ಕಲ್ಪನೆಗಳನ್ನು ಮರೆತು ಸಮಸಮಾಜ ನಿರ್ಮಾಣಕ್ಕೆ ಸಾಕ್ಷಿಕರಿಸಬೇಕಿದೆ ಎಂದರು.
ಮುಸಲ್ಲಾನರು ಅತ್ಯಂತ ಶ್ರದ್ದಾಭಕ್ತಿಗಳಿಂದ ರಂಜಾನ್ ಹಬ್ಬವನ್ನು ಆಚರಿಸುವರು, ತನ್ನ ಹಸಿವು ಮತ್ತು ಬಾಯಾರಿಕೆಯ ಕಾಠಿಣ್ಯತೆ ಅರಿಯುವ ಮೂಲಕ ನಮ್ಮ ಸುತ್ತಲಿರುವ ಬಡವರು, ಅನಾಥರು, ನಿರ್ಗತಿಕರು ಮತ್ತು ದುರ್ಬಲರ ಕಷ್ಟಗಳನ್ನು ಮನವರಿಕೆ ಮಾಡಿಕೊಡುವುದು ಹಬ್ಬದ ಮೂಲ ಉದ್ದೇಶ ಎಂದರು.
ಸಮಾಜದಲ್ಲಿ ಎಲ್ಲರೂ ದ್ವೇಷ, ಅಸೂಹೆ ಕೈಬಿಟ್ಟು ಸಹೋದರರಂತೆ ಬಾಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುರಾಭ್ಯಾಸ, ಕೆಟ್ಟ ಆಲೋಚನೆಗಳನ್ನು ದೂರಮಾಡಿ ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದು ಶಾಂತಿ ಸೌಹಾರ್ದತೆಯ ಪ್ರತೀಕವಾದ ರಂಜಾನ್ ಹಬ್ಬದ ಸಂದೇಶ ಆಗಿದೆ ಎಂದು ತಿಳಿಸಿದ ಆಂಜನೇಯ, ನಾಡಿನ ಜನತೆಗೆ ಸುಖ, ಸಮೃದ್ಧಿಯನ್ನು ತರಲಿ ಎಂದು ಹಾರೈಸಿದರು.
ಚಿಕ್ಕಜಾಜೂರು, ಮಲ್ಲಾಡಿಹಳ್ಳಿ ಗ್ರಾಮದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಕೋರಿಕೊಂಡರು
ಪುರಸಭೆ ಸದಸ್ಯರಾದ ಸೈಯದ್ ಸಜೀಲ್, ಸೈಯದ್ ಮನ್ಸೂರ್, ಮಾಜಿ ಪಟದ ಅಧ್ಯಕ್ಷ ಅಲೀಂಉಲ್ಲಾ ಷರೀಫ್, ಜಾಮೀಯಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಖಾನ್, ಅಸ್ಸಾ ಮುತ್ವಲ್ಲಿ ಇಲಿಯಾಸ್ ಖಾನ್, ಹೊಳಲ್ಕೆರೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಜರ್ ಉಲ್ಲಾಖಾನ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ದಾವುದ್, ಪಪಂ ಮಾಜಿ ಸದಸ್ಯ ಸೈಯದ್ ಸಯೀದ್, ಅಲ್ಲಾ ಭಕ್ಷಿಖಾನ್, ಅಬೀಬುಲ್ಲಾ ರೆಹಮಾನ್ ಉಪಸ್ಥಿತರಿದ್ದರು.